
ವಿಟ್ಲ: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯಲ್ಲಿರುವ ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರಿ) ಅಮ್ಮನವರ ಕಾಲಾವಧಿ ಕಜಂಬು ಜಾತ್ರೆಯು ಡಿಸೆಂಬರ್ 16ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪೂರ್ವಾಶಿಷ್ಟ ಸಂಪ್ರದಾಯದಂತೆ ನಡೆಯುವ ಜಾತ್ರೆಯು ಡಿಸೆಂಬರ್ 16ರ ಬುಧವಾರ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ಡಿಸೆಂಬರ್ 17ರ ಗುರುವಾರ ಕಜಂಬು ಉತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಕಜಂಬಿನ ಮಕ್ಕಳು ಹಾಗೂ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಗಂಧಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ, ಬಂಗಾರು ಅರಸರು ವಿಟ್ಲ ಅರಮನೆ, ಅನುವಂಶಿಕ ಮೊಕ್ತೇಸರರು, ಸೀಮೆಯ ಗುರಿಕ್ಕಾರರು ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಊರ ಹಾಗೂ ಪರವೂರ ಭಕ್ತಾದಿಗಳು ಹೊರೆಕಾಣಿಕೆ ಸಮರ್ಪಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಸೇವಾ ಸಮಿತಿ ಮನವಿ ಮಾಡಿದೆ. ಡಿಸೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ ಕಲ್ಲಂಗಳ ಮಹಾದ್ವಾರದಿಂದ ಹಸಿರುವಾಣಿ ಮೆರವಣಿಗೆ ಹೊರಡಲಿದೆ.
ಧನು ಸಂಕ್ರಮಣದಂದು ಶ್ರೀದೇವಿಯ ಸನ್ನಿಧಿಗೆ ಹಸಿರುವಾಣಿ ಸಮರ್ಪಿಸಿ ಸಾಮೂಹಿಕ ಅನ್ನಪ್ರಸಾದ ಭೋಜನಕ್ಕೆ ಸಹಕರಿಸುವಂತೆಯೂ ಕೋರಲಾಗಿದೆ.ಇದೇ ಸಂದರ್ಭದಲ್ಲಿ ಡಿಸೆಂಬರ್ 24ರಂದು ಗುರುವಾರ ಭಂಡಾರದ ಕೊಟ್ಟದಲ್ಲಿ ಮಲರಾಯಿ ದೈವ ಹಾಗೂ ಪಿಲಿಚಾಮುಂಡಿ ದೈವಗಳಿಗೆ ನೇಮ ನಡೆಯಲಿದೆ.ಇದರೊಂದಿಗೆ ಕೇಪು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಡಿಸೆಂಬರ್ 15 ಮತ್ತು 16ರಂದು ವಾರ್ಷಿಕ ಷಷ್ಠಿ ಉತ್ಸವ ಹಾಗೂ ಬಲಿವಾಡು ಕೂಟ ನಡೆಯಲಿದೆ. ಡಿಸೆಂಬರ್ 15ರಂದು ಬಲಿವಾಡು ಕೂಟ, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ರಾತ್ರಿ 9.30ಕ್ಕೆ ಉತ್ಸವ ಬಲಿ ಮತ್ತು ಕಟ್ಟೆಪೂಜೆ ಜರುಗಲಿದೆ. ಡಿಸೆಂಬರ್ 16ರಂದು ಬೆಳಿಗ್ಗೆ 9 ಗಂಟೆಗೆ ಉತ್ಸವ ಬಲಿ ಹಾಗೂ ಬಟ್ಟಲು ಕಾಣಿಕೆ ನಡೆಯಲಿದೆ.
ಗ್ರಾಮದ ಪ್ರತಿಯೊಂದು ಮನೆಯಿಂದಲೂ ಬಲಿವಾಡು ಸಮರ್ಪಿಸುವಂತೆ ದೇವಸ್ಥಾನದ ವತಿಯಿಂದ ವಿನಂತಿಸಲಾಗಿದ್ದು, ಭಕ್ತಾದಿಗಳು ಉತ್ಸವಗಳಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.








