Thursday, November 19, 2026
spot_imgspot_img
spot_imgspot_img

ಕರ್ಣಾಟಕ ಬ್ಯಾಂಕ್‌ನ ನೂತನ ಎಂಡಿ, ಸಿಇಒ ಆಗಿ ಕುಂದಾಪುರದ ಉದಯ ಕುಮಾರ್ ಹೆಬ್ಬಾರ್ ನೇಮಕ

- Advertisement -
- Advertisement -

ಮುಂಬೈ: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ತನ್ನ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಉದಯ ಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಿದೆ.

ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಷೇರು ವಿನಿಮಯ ಕೇಂದ್ರಗಳಿಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕ, ಪೂರ್ಣಾವಧಿ ನಿರ್ದೇಶಕ ಹಾಗೂ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಉದಯ ಕುಮಾರ್ ಹೆಬ್ಬಾರ್ ಕಾರ್ಯನಿರ್ವಹಿಸಲಿದ್ದಾರೆ. ಈ ನೇಮಕಾತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 16, ಪತ್ರದ ಮೂಲಕ ತನ್ನ ಅನುಮೋದನೆ ನೀಡಿತ್ತು.

ಪ್ರಸ್ತುತ ‘ಕ್ರೆಡಿಟ್‌ಆಕ್ಸೆಸ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್‌’ನ ಕಾರ್ಯನಿರ್ವಾಹಕೇತರ(ನಾಮನಿರ್ದೇಶಿತ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಉದಯ ಕುಮಾರ್ ಹೆಬ್ಬಾರ್ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ಕಾರ್ಪೊರೇಷನ್ ಬ್ಯಾಂಕ್ ಮೂಲಕ ವೃತ್ತಿಜೀವನ ಆರಂಭಿಸಿದ ಇವರು, ಗ್ರಾಮೀಣ ಮತ್ತು ನಗರ ಬ್ಯಾಂಕಿಂಗ್ ಕ್ಷೇತ್ರದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1995ರಲ್ಲಿ ಐಸಿಐಸಿಐ ಬ್ಯಾಂಕ್ ಸೇರಿದ ಇವರು 12 ವರ್ಷಗಳ ಕಾಲ ಕಾರ್ಪೊರೇಟ್ ಕ್ರೆಡಿಟ್, ಪಾವತಿ ಕಾರ್ಯಾಚರಣೆ, ಗ್ರಾಮೀಣ-ಸೂಕ್ಷ್ಮ ಬ್ಯಾಂಕಿಂಗ್ ಮತ್ತು ಕೃಷಿ ವ್ಯವಹಾರ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಳಿಕ 2007ರಲ್ಲಿ ಬಾರ್ಕ್ಲೇಸ್ ಇಂಡಿಯಾದ ವಾಣಿಜ್ಯ ಮತ್ತು ಪಾವತಿ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಸೇರ್ಪಡೆಯಾದರು.

2010ರಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಯಾದ ಕ್ರೆಡಿಟ್‌ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ಗೆ ಸಿಇಒ ಆಗಿ ಸೇರಿದ ಹೆಬ್ಬಾರ್, 2015ರಲ್ಲಿ ಎಂಡಿ ಮತ್ತು ಸಿಇಒ ಆಗಿ ಬಡ್ತಿ ಪಡೆದರು. 2018ರಲ್ಲಿ ಸಂಸ್ಥೆಯನ್ನು ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಹಾಗೂ 2020ರ ಕೋವಿಡ್ ಸಂಕಷ್ಟದ ನಡುವೆಯೂ ಕ್ಯೂಐಪಿ ಮೂಲಕ ಬಂಡವಾಳ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೂನ್ 25, 2025ರಂದು ಕಾರ್ಯನಿರ್ವಾಹಕ ಹುದ್ದೆಯಿಂದ ನಿವೃತ್ತರಾದ ಬಳಿಕ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಹಾಗೂ ನೆದರ್‌ಲ್ಯಾಂಡ್ಸ್‌ನ ಪ್ರವರ್ತಕ ಕಂಪನಿ ‘ಕ್ರೆಡಿಟ್‌ಆಕ್ಸೆಸ್ ಇಂಡಿಯಾ ಬಿವಿ’ಯ ನಿರ್ದೇಶಕರಾಗಿ ಮುಂದುವರಿದಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಉದಯ ಕುಮಾರ್ ಹೆಬ್ಬಾರ್ ಅವರು ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್‌ನ ಅಸೋಸಿಯೇಟ್ ಅರ್ಹತೆಯೊಂದಿಗೆ, ಅಮೆರಿಕದ ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯ ಮತ್ತು ಬಿಎಐ ಜಂಟಿಯಾಗಿ ನೀಡುವ ಬ್ಯಾಂಕಿಂಗ್ ಕಾರ್ಯಾಚರಣೆ ಮತ್ತು ತಂತ್ರಜ್ಞಾನ ಪದವಿಯನ್ನೂ ಪೂರೈಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!