Friday, November 20, 2026
spot_imgspot_img
spot_imgspot_img

ಎಸ್‌ಐಟಿ ತನಿಖೆಗೆ ತಡೆ ಕೋರಿ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

- Advertisement -
- Advertisement -

ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಸಂಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆಯನ್ನು ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಗಿರೀಶ್ ಮಟ್ಟಣವರ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರಿಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ತನಿಖೆ ಪ್ರಗತಿಯಲ್ಲಿರುವಾಗ ಎಫ್‌ಐಆ‌ರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತಲ್ಲದೆ, ಅರ್ಜಿದಾರರ ದ್ವಂದ್ವ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ಮಟ್ಟಣ್ಣವರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌.ಬಾಲನ್, ಹಾಲಿ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ದಾಖಲಿಸಬೇಕಿತ್ತು. ಆದರೆ, ದೂರುದಾರ ಮುಸುಕುಧಾರಿ ಚಿನ್ನಯ್ಯ ಸರ್ಕಾರಿ ನೌಕರನಲ್ಲ. ಅಸಂಜ್ಞೆಯ ಅಪರಾಧಕ್ಕೆ ಪೊಲೀಸರು ನೇರವಾಗಿ ಎಫ್‌ಐಆ‌ರ್ ದಾಖಲಿಸಿರುವುದು ಕಾನೂನುಬಾಹಿರ ಎಂದು ನ್ಯಾಯಪೀಠಕ್ಕೆ ವಿವರಿಸಿದರಲ್ಲದೆ, ವಿಚಾರಣೆಯ ನೆಪದಲ್ಲಿ ತಮ್ಮ ಕಕ್ಷಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಯಾಗಿ ಎಸ್‌ಐಟಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್‌. ಜಗದೀಶ್ ವಾದ ಮಂಡಿಸಿ, ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್‌ಐಆ‌ರ್ ದಾಖಲಿಸಲಾಗಿದೆ. ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದು ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾದ ನಂತರವೇ ಹೊರತು, ತನಿಖೆಯ ಹಂತದಲ್ಲಲ್ಲ ಎಂದು ಸುಪ್ರೀಂಕೋರ್ಟ್‌ ಹಲವು ತೀರ್ಪುಗಳು ಸ್ಪಷ್ಟಪಡಿಸಿವೆ ಎಂದರು. ಜತೆಗೆ, ಈ ಹಿಂದೆ ಬೇರೊಂದು ಅರ್ಜಿಯಲ್ಲಿ ಇದೇ ಅರ್ಜಿದಾರರು ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯಲಿ ಎಂದು ಕೋರಿದ್ದರು. ಈಗ ತನಿಖೆಯು ತಮ್ಮತ್ತಲೇ ತಿರುಗುತ್ತಿದ್ದಂತೆ ಎಫ್‌ಐಆರ್ ರದ್ದು ಮಾಡಿ ಎನ್ನುತ್ತಿದ್ದಾರೆ ಎಂದು ಅರ್ಜಿದಾರರ ದ್ವಂದ್ವ ನಿಲುವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೂಲ ಎಫ್‌ಐಆ‌ರ್ ‘ಅಜ್ಞಾತ ವ್ಯಕ್ತಿ’ಗಳ ವಿರುದ್ಧ ದಾಖಲಾಗಿದೆ. ತನಿಖೆಯಲ್ಲಿ ಸಾಕ್ಷ್ಯಗಳು ಲಭ್ಯವಾದ ಕಾರಣ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಒಂದೆಡೆ ತನಿಖೆ ನಡೆಯಲಿ ಎನ್ನುತ್ತೀರಿ, ಮತ್ತೊಂದೆಡೆ ತನಿಖೆ ರದ್ದು ಮಾಡಿ ಎನ್ನುತ್ತೀರಿ.

ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್‌ಐಆರ್ ರದ್ದು ಕೋರುವುದು ಅಕಾಲಿಕ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ನ್ಯಾಯಾಧೀಶರ ಕೆಲಸ ತಾವರೆ ಎಲೆಯ ಮೇಲಿನ ನೀರಿನಂತಿರಬೇಕು. ನೀರಿನಲ್ಲೇ ಬೆಳೆಯಬೇಕು, ಆದರೆ, ನೀರನ್ನು ಅಂಟಿಸಿಕೊಳ್ಳಬಾರದು. ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ಮಾತ್ರ ತೀರ್ಪು ನೀಡಬೇಕೇ ಹೊರತು, ನೈತಿಕ ವಿಚಾರಗಳು ತೀರ್ಪಿನೊಳಗೆ ಇಣುಕಬಾರದು ಎಂದು ನ್ಯಾಯಮೂರ್ತಿಗಳು ಮಾರ್ಮಿಕವಾಗಿ ನುಡಿದರು.

ಪ್ರಕರಣವೇನು?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬ ನೀಡಿದ್ದ ದೂರಿನ ಸತ್ಯಾಸತ್ಯತೆ ಪತ್ತೆಹಚ್ಚಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು, ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿನ ವೈರುಧ್ಯಗಳನ್ನು ಪತ್ತೆಹಚ್ಚಿದ್ದರು. ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂಬ ಆರೋಪದಡಿ ಚಿನ್ನಯ್ಯ ಅಲಿಯಾಸ್ ಚಿನ್ನ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಆರು ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ ಹಾಗೂ ನಕಲಿ ದಾಖಲೆ ತಯಾರಿಕೆ ಆರೋಪದಡಿ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆ‌ರ್ ರದ್ದು ಕೋರಿ ಮಟ್ಟಣ್ಣವ‌ರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

- Advertisement -

Related news

error: Content is protected !!