


ನವದೆಹಲಿ: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿರುವವರಿಗೆ ಮತ್ತೊಂದು ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಇಳಿಕೆಯ ಹಾದಿಯಲ್ಲಿರುವ ಎರಡೂ ಲೋಹಗಳ ಬೆಲೆ ಈ ವಾರವೂ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

ಕಳೆದ ಮೂರು ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 30 ಸಾವಿರ ರೂ. ಇಳಿಕೆಯಾಗಿದ್ದರೆ, ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ 1.50 ಲಕ್ಷ ರೂ. ಕುಸಿತ ಕಂಡಿದೆ. ಇದೀಗ ಮತ್ತಷ್ಟು ಬೆಲೆ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.ಅಮೆರಿಕ ಸರ್ಕಾರ ಶೀಘ್ರದಲ್ಲೇ ಹಣದುಬ್ಬರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಪ್ರಕಟಿಸಲಿದೆ. ಈ ವರದಿಯು ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರದ ಕುರಿತು ಕೈಗೊಳ್ಳುವ ಮುಂದಿನ ನಿರ್ಧಾರದ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಜಾಗತಿಕ ಹೂಡಿಕೆದಾರರು ಅಮೆರಿಕದ ಆರ್ಥಿಕ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಹಣದುಬ್ಬರದ ಅಂಕಿಅಂಶಗಳು ಹಾಗೂ ಬಡ್ಡಿದರದ ನಿರ್ಧಾರ ಪ್ರಕಟವಾಗುವವರೆಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ವಾರವೂ ಎರಡೂ ಲೋಹಗಳ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿ ಮೂಡಿದೆ.








