


ಬೆಂಗಳೂರು: 15,000 ರೂ. ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಆಶಾ ಕಾರ್ಯಕರ್ತೆಯರು, ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ 7 ದಿನಗಳಿಂದ ಚಳಿ, ಮಳೆ ಎನ್ನದೇ ಫ್ರೀಡಂ ಪಾರ್ಕ್ನಲ್ಲೇ ಹೋರಾಟ ಮುಂದುವರಿಸುತ್ತಿರುವ ಕಾರ್ಯಕರ್ತೆಯರು, ರಾತ್ರಿ ವೇಳೆ ರಸ್ತೆ ಹಾಗೂ ಫುಟ್ಪಾತ್ಗಳಲ್ಲೇ ಮಲಗುವಂತಾಗಿದೆ. ಸರ್ಕಾರದೊಂದಿಗೆ ಈಗಾಗಲೇ ಮೂರು ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಾತುಕತೆ ವಿಫಲವಾದ ಹಿನ್ನೆಲೆ ಪ್ರತಿಭಟನೆಯನ್ನ ಅನಿರ್ದಿಷ್ಟಾವಧಿಗೆ ವಿಸ್ತರಿಸಲು ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.
ನಿನ್ನೆ ಪ್ರತಿಭಟನಾಕಾರರು ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ವಿನೂತನವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಸರ್ಕಾರದಿಂದ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತೆಯರು, ಬೇಡಿಕೆ ಈಡೇರುವವರೆಗೂ ಫ್ರೀಡಂ ಪಾರ್ಕ್ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.
ಒಂದೆಡೆ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರಿದಿದ್ದರೆ, ಮತ್ತೊಂದೆಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಆಶಾ ಕಾರ್ಯಕರ್ತೆಯರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ನಿರಂತರ 8 ದಿನಗಳ ಹೋರಾಟ ಹಾಗೂ ಚಳಿಯ ವಾತಾವರಣದಿಂದ ಹಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಇಲ್ಲಿಯವರೆಗೆ 18 ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹೊಟ್ಟೆ ನೋವು, ರಕ್ತದೊತ್ತಡ, ಮಧುಮೇಹ, ಚಳಿ ಹಾಗೂ ಮೈಕೈ ನೋವಿನಿಂದ ಹಲವರು ಬಳಲುತ್ತಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ 2,550ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.
7 ರಾತ್ರಿಗಳನ್ನು ಚಳಿಯಲ್ಲೇ ಕಳೆದರೂ ಸರ್ಕಾರದಿಂದ ಬೇಡಿಕೆಗಳಿಗೆ ಸ್ಪಂದನೆ ಸಿಗದಿರುವುದು ಕಾರ್ಯಕರ್ತೆಯರ ಅಸಮಾಧಾನಕ್ಕೆ ಕಾರಣವಾಗಿದೆ. ದಿನಗಳು ಕಳೆದರೂ ಹೋರಾಟದಿಂದ ಹಿಂದೆ ಸರಿಯದ ಆಶಾಗಳು, ಈ ಬಾರಿ ಬೇಡಿಕೆ ಈಡೇರಿಸಿಕೊಳ್ಳದೇ ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲ ಎಂಬ ದೃಢ ನಿಲುವು ಕೈಗೊಂಡಿರುವುದಾಗಿ ತಿಳಿದುಬಂದಿದೆ.








