


ಶಿಗ್ಗಾಂವಿ: ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದ ಕಾಲೇಜಿನ ಪ್ರಾಂಶುಪಾಲ ಹಾಗೂ ಕೊಠಡಿ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.

ಶಿಗ್ಗಾಂವಿಯ ಬಿ.ಬಿ. ಮಾಮ್ಮೆದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅ.4ರಂದು ನಡೆದ ಪರೀಕ್ಷೆಯಲ್ಲಿ ಶಂಕರ್ ಬನ್ನೂರು ಎಂಬ ಪರೀಕ್ಷಾರ್ಥಿ ಮೊಬೈಲ್ ಬಳಸಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.ಪ್ರಕರಣದ ತನಿಖೆ ವೇಳೆ ಪರೀಕ್ಷಾ ಕೇಂದ್ರದ ನಿರ್ಲಕ್ಷ್ಯ ಹಾಗೂ ಮೇಲ್ವಿಚಾರಣೆಯಲ್ಲಿನ ಲೋಪಗಳೂ ಬೆಳಕಿಗೆ ಬಂದಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ರಮಾಕಾಂತ್ ಭಟ್ ಹಾಗೂ ಕೊಠಡಿ ಮೇಲ್ವಿಚಾರಕ ಬಸವರಾಜ ಸವಡಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿವರಣೆ ಪಡೆಯಲಾಗಿತ್ತು.ವಿವರಣೆ ಪರಿಶೀಲಿಸಿದ ಬಳಿಕ ಇಬ್ಬರನ್ನೂ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ್ದರು. ಅದರಂತೆ ಇದೀಗ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಗ್ಗಾಂವಿ ಠಾಣೆಯ ಪಿ.ಸಿ. ಹೊನ್ನಾಳಿ, ಸವಣೂರು ಠಾಣೆಯ ಆರ್.ಎಂ. ಮಣಕವಾಡ ಹಾಗೂ ಆಡೂರು ಠಾಣೆಯ ಎಸ್.ಆರ್. ನಾಗನೂರ ಎಂಬ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿತ್ತು.







