


ಕಡಬ: ಐತ್ತೂರು ಗ್ರಾಮದಲ್ಲಿ ಜಾಗದ ವಿಚಾರವಾಗಿ ಎರಡು ಕಡೆಯವರ ನಡುವೆ ನಡೆದ ಗಲಾಟೆ ಹಲ್ಲೆ ಮತ್ತು ಜೀವ ಬೆದರಿಕೆ ಆರೋಪಕ್ಕೆ ಕಾರಣವಾಗಿದ್ದು, ಎರಡೂ ಕಡೆಯವರು ಪ್ರತ್ಯೇಕ ದೂರು ನೀಡಿರುವ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಐತ್ತೂರು ನಿವಾಸಿ ನೀಲಮ್ಮ(46) ಎಂಬವರು ನೀಡಿದ ದೂರಿನಂತೆ, ನೀಲಮ್ಮ ಅವರ ಪತಿ ಮೃತಪಟ್ಟಿದ್ದು, ಅವರು ಮಗಳೊಂದಿಗೆ ವಾಸಿಸುತ್ತಿದ್ದಾರೆ. ನ.25ರಂದು ಮಧ್ಯಾಹ್ನ ನೀಲಮ್ಮ ಅವರು ಮನೆಯಲ್ಲಿದ್ದ ವೇಳೆ ದಿನಕರ ಅಲಿಯಾಸ್ ವಿನೋದ, ಚೈತ್ರಾ ಹಾಗೂ ಇತರ ಆರು ಮಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಜಾಗದ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೊಂದೆಡೆ, ಐತ್ತೂರು ನಿವಾಸಿ ದಿನಕರ (27) ಅವರು ನೀಡಿದ ದೂರಿನಂತೆ, ತಂದೆಯ ಹೆಸರಿನಲ್ಲಿರುವ ಐತ್ತೂರು ಗ್ರಾಮದ ಜಮೀನಿನಿಂದ ನ.25ರಂದು ಬೆಳಿಗ್ಗೆ, ತಾವು ಹಾಗೂ ಪತ್ನಿ ಚೈತ್ರಾ ಸ್ಕೂಟರ್‌ನಲ್ಲಿ ಅಡಿಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ, ಆಸ್ತಿ ವಿಚಾರದ ತಕರಾರಿನ ಹಿನ್ನೆಲೆಯಲ್ಲಿ ನೀಲಮ್ಮ ಅವರು ತಮಗೆ ಹಾಗೂ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ನೀಲಮ್ಮ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2026, ಕಲಂ: 329 (4), 118(1), 352, 351(2) r/w 3(5) -BNS 2023 ರಂತೆ ಹಾಗೂ ದಿನಕರ ನೀಡಿದ ದೂರಿನಂತೆ ಅ.ಕ್ರ: 143/2026, ಕಲಂ: 126(2), 118(1), 352, 351(3)-BNS ರಂತೆ ದಾಖಲಾಗಿದ್ದು, ಎರಡೂ ಪ್ರಕರಣಗಳನ್ನು ತನಿಖೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
.








