Friday, November 27, 2026
spot_imgspot_img
spot_imgspot_img

ತಂದೆಯಾಗುವ ಸರಕಾರಿ ನೌಕರರಿಗೆ ಗುಡ್ ನ್ಯೂಸ್: 15 ದಿನಗಳ ರಜೆ ಘೋಷಣೆ

- Advertisement -
- Advertisement -

ಚೆನ್ನೈ, ನ. 26: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಗುರುವಾರ ರಾಜ್ಯ ಸರಕಾರದ ಪುರುಷ ನೌಕರರಿಗೆ 15 ದಿನಗಳ ಪಿತೃತ್ವದ ರಜೆ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ ಇಂತಹ ಸೌಲಭ್ಯವನ್ನು ಪರಿಚಯಿಸುತ್ತಿರುವುದು ಇದೇ ಮೊದಲು.

ಹೊಸ ನಿಯಮದ ಪ್ರಕಾರ ವಿವಾಹಿತ ಪುರುಷ ಸರಕಾರಿ ನೌಕರರು ಮಗುವಿನ ನಿರೀಕ್ಷಿತ ಹೆರಿಗೆಯ 15 ದಿನಗಳ ಮೊದಲು ಅಥವಾ ಮಗು ಹುಟ್ಟಿದ ಆರು ತಿಂಗಳೊಳಗೆ 15 ದಿನಗಳ ರಜೆಯನ್ನು ಪಡೆದುಕೊಳ್ಳಬಹುದು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

“ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ವಿವಾಹಿತ ಪುರುಷ ಸರಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲಾಗಿದೆ. ಮಗುವಿನ ಜನನದ 15 ದಿನಗಳ ಮೊದಲು ಅಥವಾ ಮಗು ಹುಟ್ಟಿದ ದಿನಾಂಕದಿಂದ ಆರು ತಿಂಗಳೊಳಗೆ ಈ ರಜೆಯನ್ನು ಬಳಸಿಕೊಳ್ಳಬಹುದು” ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ

ಹೆರಿಗೆಯ ಅವಧಿಯು ತಾಯಿ ಮತ್ತು ನವಜಾತ ಶಿಶು ಇಬ್ಬರಿಗೂ. ನಿರ್ಣಾಯಕವಾಗಿದೆ. ತಾಯಿಗೆ ದೈಹಿಕ ಮತ್ತು ಮಾನಸಿಕ ಬೆಂಬಲ ನೀಡಲು ಹಾಗೂ ಮಗುವಿನ ಆರೈಕೆಗೆ ನೆರವಾಗಲು ತಂದೆಯ ಉಪಸ್ಥಿತಿ ಅಗತ್ಯ ಎಂದು ರಾಜ್ಯ ಸರಕಾರ ಹೇಳಿದೆ.

ತಮಿಳುನಾಡಿನಲ್ಲಿ ಮಹಿಳಾ ಸರಕಾರಿ ನೌಕರರಿಗೆ 365 ದಿನಗಳ ಮಾತೃತ್ವ ರಜೆ ಸೌಲಭ್ಯವಿದ್ದು ಪುರುಷ ನೌಕರರು ಕೂಡ ಇದೇ ರೀತಿಯ ಸೌಲಭ್ಯವನ್ನು ಕೋರುತ್ತಿದ್ದರು. ಅವರ ಮನವಿಯನ್ನು ಪರಿಗಣಿಸಿದ ಸರಕಾರ ಈಗ 15 ದಿನಗಳ ರಜೆ ಸೌಲಭ್ಯ ನೀಡಿ ಆದೇಶ ಹೊರಡಿಸಿದೆ.

ರಾಜ್ಯ ಸರಕಾರದ ಮಹಿಳಾ ನೌಕರರ 365 ದಿನಗಳ ಮಾತೃತ್ವ ರಜೆ ಸೌಲಭ್ಯವನ್ನು ಅವರ ಮೂರನೇ ಮಗುವಿಗೂ ವಿಸ್ತರಿಸಿದ ಎರಡು ತಿಂಗಳ ನಂತರ ವಿಜಯ್ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

- Advertisement -

Related news

error: Content is protected !!