- Advertisement -
- Advertisement -


ದಾವಣಗೆರೆ: ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ 3 ವರ್ಷದ ಮಗಳ ಜೊತೆ ತಂದೆ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೀಟೂರು ಗ್ರಾಮದ ಗಂಗನರಸಿ ಕ್ರಾಸ್ ಬಳಿ ನಡೆದಿದೆ.
ಹರಿಹರ ನಗರದ ಆಶ್ರಯ ಕಾಲೊನಿ ನಿವಾಸಿ, ಟ್ಯಾಕ್ಸಿ ಚಾಲಕ ಮನೋಜ್ (35) ಮತ್ತು ಅವರ ಪುತ್ರಿ ಧೃತಿ (3) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಮನೋಜ್ ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹೆಚ್ ಕಲ್ಪನಹಳ್ಳಿಯಲ್ಲಿ ಹಬ್ಬ ಮುಗಿಸಿಕೊಂಡು ಬೈಕ್‌ನಲ್ಲಿ ಹರಿಹರಕ್ಕೆ ವಾಪಸಾಗುತ್ತಿದ್ದರು. ಗಂಗನರಸಿ ದೀಟೂರು ರಸ್ತೆಯ ಕ್ರಾಸ್ ಬಳಿ ಎದುರಿನಿಂದ ಬಂದ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ಐವರೂ ಗಾಯಗೊಂಡಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ಹಾಗೂ ಧೃತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನದ ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








