Saturday, November 28, 2026
spot_imgspot_img
spot_imgspot_img

ಆ್ಯಸಿಡ್ ಚಿಲ್ಲರೆ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್ ಪ್ರಸ್ತಾಪ

- Advertisement -
- Advertisement -

ಹೊಸದಿಲ್ಲಿ: ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಸುಲಭವಾಗಿ ಲಭ್ಯವಾಗುತ್ತಿರುವುದು ಹಾಗೂ ಆ್ಯಸಿಡ್ ದಾಳಿಗಳು ಮುಂದುವರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಆ್ಯಸಿಡ್‌ಗಳ ಚಿಲ್ಲರೆ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರುವ ಪ್ರಸ್ತಾಪ ಮುಂದಿಟ್ಟಿದೆ.

ಶಹೀನ್ ಮಲಿಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ, ಆ್ಯಸಿಡ್‌ಗಳನ್ನು ಕೇವಲ ವೈದ್ಯಕೀಯ ಉದ್ದೇಶಕ್ಕಾಗಿ ಸರಕಾರಿ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಅಂಗಡಿಗಳ ಮೂಲಕ ಮಾರಾಟ ಮಾಡುವಂತೆ ಸಲಹೆ ನೀಡಿದೆ. ಅಲ್ಲದೆ, ಮಾರಾಟಕ್ಕೂ ಮುನ್ನ ಮುಖ್ಯ ವೈದ್ಯಕೀಯ ಅಧಿಕಾರಿ ಅಥವಾ ಸಾರ್ವಜನಿಕ ಶಸ್ತ್ರಚಿಕಿತ್ಸಕರಿಂದ ಲಿಖಿತ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನೂ ಮುಂದಿಟ್ಟಿದೆ.

ಖರೀದಿಸಿದ ಆ್ಯಸಿಡ್ ದುರ್ಬಳಕೆಯಾಗಿ ಬೇರೆ ಉದ್ದೇಶಗಳಿಗೆ ಬಳಸಲ್ಪಟ್ಟರೆ, ಅಂತಹ ದುರ್ಬಳಕೆಯ ಬಗ್ಗೆ ಖರೀದಿದಾರರಿಗೆ ಅರಿವಿಲ್ಲದಿದ್ದರೂ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆ್ಯಸಿಡ್‌ಗಳ ಚಿಲ್ಲರೆ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಏಕೆ ಹೇರಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಈ ಹಿಂದೆ ಕೇಂದ್ರ ಸರಕಾರಕ್ಕೆ ಸೂಚಿಸಿದ್ದ ನ್ಯಾಯಾಲಯ, ನವೆಂಬರ್ 23ರಂದು ನೀಡಿದ ಆದೇಶದಲ್ಲಿ ಈ ಸಲಹೆಗಳನ್ನು ಮುಂದಿಟ್ಟಿದೆ.2013ರ ಜುಲೈ 18ರಂದು ಲಕ್ಷ್ಮಿ ವರ್ಸಸ್ ಕೇಂದ್ರ ಸರಕಾರ ಪ್ರಕರಣದಲ್ಲಿ ಆ್ಯಸಿಡ್ ಮಾರಾಟ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ನೀಡಿದ್ದ ನಿರ್ದೇಶನಗಳ ಸಮರ್ಪಕ ಜಾರಿಯಾಗದಿರುವುದಕ್ಕೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಆ್ಯಸಿಡ್ ದಾಳಿಗಳು ಮುಂದುವರಿಯುತ್ತಿರುವುದು ನ್ಯಾಯಾಲಯ ಸೂಚಿಸಿದ್ದ ಕಾನೂನು ರಕ್ಷಣೆಗಳು ನಿರೀಕ್ಷಿತ ಫಲ ನೀಡಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.2013ರ ನಿರ್ದೇಶನದಂತೆ, ಅನುಮತಿ ಪಡೆದು ಆ್ಯಸಿಡ್ ಮಾರಾಟ ಮಾಡುವಾಗ ಖರೀದಿದಾರರ ಹೆಸರು, ವಿಳಾಸ, ಸಂಪರ್ಕ ವಿವರ, ಖರೀದಿಸಿದ ಪ್ರಮಾಣ ಹಾಗೂ ಬಳಕೆಯ ಉದ್ದೇಶವನ್ನು ಕಡ್ಡಾಯವಾಗಿ ದಾಖಲಿಸಬೇಕು. ಖರೀದಿದಾರರು ಆ್ಯಸಿಡ್ ಬಳಸುವ ಉದ್ದೇಶವನ್ನೂ ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.

- Advertisement -

Related news

error: Content is protected !!