

ಬೆಂಗಳೂರು: ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 12ನೇ ದಿನವೂ ಮುಂದುವರಿದಿದೆ.

ಹೆಚ್ಚುವರಿ 2 ಸಾವಿರ ರೂ. ಗೌರವಧನ ನೀಡಲು ಸರಕಾರ ಒಪ್ಪಿಗೆ ಸೂಚಿಸಿದ್ದರೂ, ಲಿಖಿತ ಭರವಸೆ ನೀಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಸ್ತುತ ರಾಜ್ಯ ಸರಕಾರದಿಂದ 5 ಸಾವಿರ ರೂ. ಹಾಗೂ ಕೇಂದ್ರ ಸರಕಾರದಿಂದ 2 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಕಾರ್ಯನಿರ್ವಹಣೆ ಆಧರಿಸಿ ಸರಾಸರಿ 2 ಸಾವಿರ ರೂ. ಪ್ರೋತ್ಸಾಹಧನವೂ ದೊರೆಯುತ್ತಿದೆ ಎಂದು ತಿಳಿಸಿದರು.ಕಳೆದ ಮೂರು ವರ್ಷಗಳಿಂದ ಗೌರವಧನ ಹೆಚ್ಚಳ ಮಾಡಿಲ್ಲ ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿತ್ತು.
ಇದೀಗ ಪ್ರಸ್ತುತ ನೀಡುತ್ತಿರುವ ಗೌರವಧನಕ್ಕೆ ಹೆಚ್ಚುವರಿಯಾಗಿ 2 ಸಾವಿರ ರೂ. ನೀಡಲು ಸರಕಾರ ನಿರ್ಧರಿಸಿದ್ದು, 2027ರ ಜನವರಿ 1ರಿಂದ ಇದು ಜಾರಿಗೆ ಬರಲಿದೆ. ಮುಂದಿನ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.ಆದರೆ, ಸರಕಾರದ ಘೋಷಣೆಗೆ ತೃಪ್ತರಾಗದ ಕಾರ್ಯಕರ್ತೆಯರು ಲಿಖಿತ ಭರವಸೆ ನೀಡುವಂತೆ ಆಗ್ರಹಿಸಿದ್ದಾರೆ. ಹಿಂದೆಯೂ ಹಲವು ಭರವಸೆಗಳು ಈಡೇರದೆ ಉಳಿದಿರುವುದರಿಂದ ಮೌಖಿಕ ಭರವಸೆಯನ್ನು ನಂಬಲು ಸಾಧ್ಯವಿಲ್ಲ. ಹೋರಾಟದಲ್ಲಿ ಪಾಲ್ಗೊಂಡಿರುವ ಎಲ್ಲ ಕಾರ್ಯಕರ್ತೆಯರ ಒಪ್ಪಿಗೆ ಪಡೆಯದೆ ಧರಣಿ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮಾಸಿಕ 15 ಸಾವಿರ ರೂ. ಗೌರವಧನ ನೀಡಬೇಕು ಎಂಬುದು ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಮಳೆ, ಚಳಿ ಹಾಗೂ ಆರೋಗ್ಯ ಸಮಸ್ಯೆಗಳ ನಡುವೆಯೂ 12ನೇ ದಿನವೂ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.








