ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಅವರು ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಎನ್.ವಿ ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಬೋಬ್ಡೆ ಅವರು ಏಪ್ರಿಲ್ 23ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಕಳೆದ ವಾರ ಅವರಿಗೆ ಮುಂದಿನ ಸಿಜೆಐ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವಂತೆ ಕೇಳಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕಳೆದ ಶುಕ್ರವಾರ ಬೋಬ್ಡೆ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು.

ಪ್ರಸ್ತುತ ಬೋಬ್ಡೆ ಅವರ ನಂತರ ಸುಪ್ರೀಂಕೋರ್ಟ್ನಲ್ಲಿ ಅತ್ಯಂತ ಹಿರಿಯ ಜಡ್ಜ್ ನ್ಯಾ. ಎನ್.ವಿ ರಮಣ. ಅವರಿಗೆ 2022 ಆಗಸ್ಟ್ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲು ಅವಧಿ ಇರಲಿದೆ.

ಆಂಧ್ರಪ್ರದೇಶದ ಕೃಷಿ ಹಿನ್ನೆಲೆಯ ಕುಟುಂಬದವರಾದ ರಮಣ ಅವರು 2000 ಇಸವಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಬಳಿಕ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು.









