ಮುಂಬೈ: ಐಪಿಎಲ್ 2021ರ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 4 ರನ್ಗಳ ರೋಚಕ ಗೆಲುವು ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಕೊನೆಯ ಎಸೆತದವರೆಗೂ ತಂಡಕ್ಕೆ ಗೆಲುವು ತಂದು ಕೊಡಲು ಹೋರಾಟ ನಡೆಸಿ ವಿಫಲರಾದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ 222 ರನ್ಗಳ ಬೃಹತ್ ರನ್ ಗುರಿಯನ್ನು ನೀಡಿತ್ತು. 222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಪ್ರಾರಂಭದಲ್ಲಿ ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿದರೂ ಅಂತಿಮವಾಗಿ ಪಂಜಾಬ್ ಗೆಲುವು ಪಡೆಯಲು ಯಶಸ್ವಿಯಾಯಿತು.
ರಾಜಸ್ಥಾನ ಪರ ನಾಯಕ ಸಂಜು ಸ್ಯಾಮ್ಸನ್ 63 ಎಸೆತಗಳಲ್ಲಿ 119 ರನ್ ಗಳಿಸಿ ಇನ್ನಿಂಗ್ಸ್ನ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಬಟ್ಲರ್ 25 ರನ್, ದುಬೆ 23 ರನ್, ಪ್ರಯಾಗ್ 25 ರನ್ ಗಳಿಸಿದರು. ಪಂಜಾಬ್ ಪರ ನಾಯಕ ಕೆ.ಎಲ್ ರಾಹುಲ್ 91 ರನ್, ದೀಪಕ್ ಹೂಡಾ 64 ರನ್, ಗೇಲ್ 40 ಹಾಗೂ ಮಯಾಂಕ್ 14 ರನ್ ಗಳಿಸಿದರು.