ಬೆಂಗಳೂರು: 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆಯನ್ನು ನೀಡದಿರಲು ಕರ್ನಾಟಕ ಸರ್ಕಾರ ಮುಂದಾಗಿದೆ. ಸಿಎಂ ಯಡಿಯೂರಪ್ಪನವರು ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ 19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು.

ಬಳಿಕ ಸದ್ಯಕ್ಕೆ 18 ರಿಂದ 44 ವರ್ಷದ ವಯೊಮಿತಿಯವರಿಗೆ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೇ.14 ರಿಂದ ಮುಂದಿನ ಆದೇಶದವರೆಗೆ ಈ ವಯೋಮಿತಿಯವರಿಗೆ ಲಸಿಕೆ ನೀಡದೇ ಇರಲು ಸರ್ಕಾರ ನಿರ್ಧಾರ ತೆಗದುಕೊಂಡಿದೆ.

ಎರಡನೇ ಡೋಸ್ ಸಿಗದ ಕಾರಣ ಈಗಿರುವ ಲಸಿಕೆಯನ್ನ ಕೇವಲ ಸೀನಿಯರ್ಸ್, ಅಂದರೆ 45 ವರ್ಷದ ಮೇಲಿನವರಿಗೆ ನೀಡಬೇಕು. 45 ವರ್ಷದವರಿಗೆ ಸೆಕೆಂಡ್ ಡೋಸ್ ಪೂರ್ಣಗೊಂಡ ಬಳಿಕ 18 – 44 ರ ವಯಸ್ಕರಿಗೆ ಲಸಿಕೆ ಹಾಕುವ ಕಾರ್ಯ ಆರಂಭಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆಯುವವರಿಗೆ ಮೊದಲ ಆಧ್ಯತೆ ಕೊಡಬೇಕೆಂದು ಸೂಚಿಸಲಾಯಿತು.

ಪ್ರತಿ ಜಿಲ್ಲೆಯ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇರಬೇಕು, ವ್ಯಾಕ್ಸಿನ್ ಪೂರೈಸುವ ಕಂಪನಿಗಳ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಲು ಸೂಚಿಸಲಾಯಿತು.

ಕೊರೋನಾ ನಿರ್ವಹಣೆ ವಿಚಾರ ನಡೆದ ಸಭೆಯಲ್ಲಿ ಡಿಸಿಎಂ ಅಶ್ವಥನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಿದ್ದರು.










