ಬೆಂಗಳೂರು: ಬಾಕಿ ಹಣ ಕಟ್ಟದಿದ್ದರೆ ಮೃತದೇಹ ಕೊಡುವುದಿಲ್ಲ ಎಂದು ಇನ್ಮುಂದೆ ಆಸ್ಪತ್ರೆಯವರು ಹೇಳುವಂತಿಲ್ಲ. ಒಂದು ವೇಳೆ ಡಿಮ್ಯಾಂಡ್ ಮಾಡಿದ್ರೆ ಅಂತಹ ಆಸ್ಪತ್ರೆ ಲೈಸೆನ್ಸ್ ರದ್ದಾಗಲಿದೆ.


ಸಾರ್ವಜನಿಕರಿಗೆ ಸಹಕಾರಿಯಾಗುವ ಇಂತಹದ್ದೊಂದು ಆದೇಶವನ್ನು ಆರೋಗ್ಯ ಇಲಾಖೆ ಹೊರಡಿಸಿದೆ. ಕೊರೋನಾ ಸೇರಿದಂತೆ ನಾನಾ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದಾರೆ. ಇಂತಹವರ ಮೃತದೇಹ ನೀಡುವ ಮುನ್ನ ಆಸ್ಪತ್ರೆ ಬಿಲ್ ಕ್ಲಿಯರ್ ಮಾಡುವಂತೆ ಖಾಸಗಿ ಆಸ್ಪತ್ರೆಯವರು ಕಿರುಕುಳ ನೀಡುತ್ತಿದ್ದರು.

ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮೃತದೇಹ ಹಸ್ತಾಂತರಿಸದೆ ಕಳ್ಳಾಟವಾಡೊ ಆಸ್ಪತ್ರೆಗಳಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ನಿರ್ಧರಿಸಿ ಇಂತಹದ್ದೊಂದು ಮಹತ್ವದ ಆದೇಶ ಹೊರಡಿಸಿದೆ.

ಸಂಬಂಧಿಕರ ಮೇಲೆ ಬಾಕಿ ವೆಚ್ಚ ಭರಿಸುವಂತೆ ಯಾವ ಆಸ್ಪತ್ರೆಗಳು ಒತ್ತಡ ಹೇರುವಂತಿಲ್ಲ. ಒಂದು ವೇಳೆ ಅಂತಾ ಪ್ರಕರಣಗಳು ಕಂಡು ಬಂದಲ್ಲಿ ಕೆಪಿಎಂಇ ಆ್ಯಕ್ಟ್ ಅಡಿ ಆಸ್ಪತ್ರೆ ಲೈಸನ್ಸ್ ರದ್ದುಗೊಳಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಆಕ್ಟ್ (ಕೆಪಿಎಂಇ) 2007 ಭಾಗ 11 (i) ಉಪಷರತ್ತು (vi) ರ ಅನ್ವಯ ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆ ಬಾಕಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ.











