Sunday, June 28, 2026
spot_imgspot_img
spot_imgspot_img

ತಂಗಿಯ ಮೃತದೇಹವನ್ನು ಊರಿಗೆ ತರುತ್ತಿದ್ದ ವೇಳೆ ಮಾರ್ಗಮಧ್ಯೆ ದುರಂತ ಅಂತ್ಯಕ್ಕೀಡಾದ ಅಣ್ಣ!

- Advertisement -
- Advertisement -

ಚಿತ್ರದುರ್ಗ: ಬೆಂಗಳೂರಿನ ಆಸ್ಪತ್ರೆಯಿಂದ ಅಪಘಾತಕ್ಕೀಡಾಗಿ ಮೃತಪಟ್ಟ ತಂಗಿಯ ಶವವನ್ನು ಊರಿಗೆ ತರುತ್ತಿದ್ದ ವೇಳೆ ಅಣ್ಣನೂ ಮಾರ್ಗಮಧ್ಯೆ ದುರಂತ ಅಂತ್ಯ ಕಂಡಿರುವ ಘಟನೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರಿನ ರಾಮು ಮುದ್ದಿಗೌಡರ್ (56) ಮತ್ತು ಇವರ ಸಹೋದರಿ ರೇಣುಕಾ ಮೃತರು. ಮೃತಪಟ್ಟ ರಾಮು ಮುದ್ದಿಗೌಡರ್ ಅವರು ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿದ್ದರು. ಹಿರೇಮೊರಬ ಗ್ರಾಮದ ವಿಎಸ್‌ಎಸ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವರು ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಹೋದರಿ ರೇಣುಕಾಗೆ ಮೂರು ದಿನಗಳ ಹಿಂದೆ ಅಪಘಾತವಾಗಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರಾಮು ಕರೆದೊಯ್ದಿದ್ದು, ಈ ವೇಳೆ ಚಿಕಿತ್ಸೆ ಫಲಿಸದೆ ರೇಣುಕಾ ಗುರುವಾರ ಮೃತಪಟ್ಟಿದ್ದರು.

ಮೃತದೇಹವನ್ನು ಆಂಬುಲೆನ್ಸ್​ನಲ್ಲಿ ತರುತ್ತಾ, ಕಾರಿನಲ್ಲಿ ರಾಮು ಹಿರೇಕೆರೂರಿಗೆ ಬರುತ್ತಿದ್ದರು. ಮಾರ್ಗಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗುರುವಾರ ರಾತ್ರಿ ಟಿಪ್ಪರ್ ಹಾಗೂ ರಾಮು ಪ್ರಯಾಣಿಸುತ್ತಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಚಲಿಸುತ್ತಿದ್ದ ಟಿಪ್ಪರ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಾಮು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ. ರೇಣುಕಾಳ ಸಾವಿನ ಸುದ್ದಿಯನ್ನೇ ಅರಗಿಸಿಕೊಳ್ಳಲಾಗದೆ ಕಣ್ಣೀರು ಹಾಕುತ್ತಿದ್ದ ಕುಟುಂಬಸ್ಥರು ರಾಮು ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ.

- Advertisement -

Related news

error: Content is protected !!