
ಸುಳ್ಯ: 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸಿನ ಸರಸ್ವತಿ ಕಾಮತ್ ಎಂಬವರ ಮೇಲೆ ಸುಳ್ಯ ಮಂಡಲ ಸಮಿತಿ ಹಾಲಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಇತರ 14 ಜನರ ಗುಂಪು ಹಲ್ಲೆ ಮತ್ತು ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತೀರ್ಪುನ್ನು ಪ್ರಕಟಿಸಿದೆ.
ಸೆಕ್ಷನ್ 149, 147/149, 341, 506 , 504, 323, 354 ಸೆಕ್ಷನ್ ಅಡಿಯಲ್ಲಿ ಪ್ರಕರಣ ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಜೆಎಂಎಫ್‌ಸಿ ಕೋರ್ಟ್ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ಅವರು ಆರೋಪಿಗಳಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಪ್ರಕರಣದ ಹಿನ್ನಲೆ:-
2014ರ ಲೋಕಸಭಾ ಚುನಾವಣೆಯ ಸಂದರ್ಭ ಸರಸ್ವತಿ ಕಾಮತ್ ಅವರು ನೆಲ್ಲೂರು ಕೇಮ್ರಾಜೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಹರೀಶ್ ಕಂಜಿಪಿಲಿ ಮತ್ತು ಇತರ 14 ಜನರ ಗುಂಪು ಸರಸ್ವತಿ ಕಾಮತ್ ಮೇಲೆ ಹಲ್ಲೆ ಮತ್ತು ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿ ಸರಸ್ವತಿ ಕಾಮತ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಆರೋಪಿ, ಸುಳ್ಯ ಮಂಡಲ ಸಮಿತಿ ಹಾಲಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಮಗೆ ಅಧಿಕೃತ ಆದೇಶ ಪ್ರತಿ ದೊರೆತ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.










