

ಉಡುಪಿ: ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಸುವ ಕೇಂದ್ರ ಸರ್ಕಾರ ನಿರ್ಣಯದ ವಿರುದ್ಧ ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಈ ನಿರ್ಧಾರ ಹಿಂದೂಗಳಿಗೆ ಅನ್ಯಾಯವಾಗುತ್ತದೆ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿಯವರು, ಕ್ರೈಸ್ತರಿಗೆ ಮತ್ತು ಮುಸ್ಲಿಮರಿಗೆ ವಿವಾಹದ ಕಾನೂನು ಬೇರೆ ಇದೆ. ನೀವು ಮಾಡುತ್ತಿರುವ ಹೊಸ ನಿರ್ಣಯ ಹಿಂದೂಗಳಿಗೆ ಮಾತ್ರ ಯಾಕೆ? ಎಲ್ಲರಿಗೂ ಅನ್ವಯವಾಗುವ ರೀತಿ ನೀವು ಕಾನೂನು ಕಾಯ್ದೆ ಯಾಕೆ ರೂಪಿಸುತ್ತಿಲ್ಲ. ಎಲ್ಲರಿಗೆ ಸಮಾನ ಕಾಯ್ದೆ ಜಾರಿಗೆ ತನ್ನಿ ಅದಕ್ಕೆ ನಮ್ಮ ಪೂರ್ತಿ ಬೆಂಬಲವಿದೆ ಎಂದರು.

ಮುಸ್ಲಿಮರ ಕಾನೂನಲ್ಲಿ ವಿವಾಹದ ವಯಸ್ಸು ಈಗಲೂ 15 ಇದೆ. ಈ ಕಾನೂನಿನ ಪ್ರಕಾರ ಮುಸ್ಲಿಮರ ಜನಸಂಖ್ಯೆ ಏರಿಕೆ ಪ್ರಮಾಣ ಜಾಸ್ತಿ ಇದೆ. ಹಿಂದೂಗಳ ಜನಸಂಖ್ಯೆ ಕಮ್ಮಿ ಇದೆ.
ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿರುವ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಸಂತರು ಕಳವಳಗೊಂಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯ ಇದೆ. ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಶ್ರೀಗಳು ಮನವಿ ಮಾಡಿದ್ದಾರೆ.









