Friday, November 13, 2026
spot_imgspot_img
spot_imgspot_img

ಕರಾವಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ವಂದೇ ಭಾರತ್ ಲೋಕಾರ್ಪಣೆ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಚಾಲನೆ

- Advertisement -
- Advertisement -

ಮಂಗಳೂರು: ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಗಳ ಸಚಿವರಾದ ಸಚಿವ ಅಶ್ವಿನಿ ವೈಷ್ಣವ್‌ ಅವರು ಹಲವು ಮಹತ್ವದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.

ಸಚಿವರು ಇಂದು(ನ.13) ಮಂಗಳೂರಿನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿರುವ ಮೊತ್ತ ಮೊದಲ ವಂದೇ ಭಾರತ್‌ ಹೈಸ್ಪೀಡ್‌ ರೈಲು ಸೇವೆಗೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರವಾಸ ಕೈಗೊಂಡು ಇಲ್ಲಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆಗಳನ್ನು ಕೂಡ ನಡೆಸಲಿರುವ ಹಿನ್ನಲೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ದಕ್ಷಿಣ ಕನ್ನಡ ಭೇಟಿಯು ಭವಿಷ್ಯದಲ್ಲಿ ಜಿಲ್ಲೆಯ ರೈಲು ಸಂಪರ್ಕ ಜಾಲದ ಬಲವರ್ಧನೆ ಹಾಗೂ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹೊಸ ಬಾಷ್ಯ ಬರೆಯುವ ನಿರೀಕ್ಷೆಗಳಿವೆ.

ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮೂರು ಮಹತ್ವದ ರೈಲ್ವೆ ಯೋಜನೆಗಳು ಲೋಕಾರ್ಪಣೆಗೊಳ್ಳಲಿವೆ.

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸಿ, ಆಧುನಿಕ ಹಾಗೂ ವೇಗದ ಪ್ರಯಾಣದ ಅನುಭವ ನೀಡುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ. ಈ ಹೈಸ್ಪೀಡ್‌ ರೈಲು ಸೇವೆಯಿಂದ ವಾಣಿಜ್ಯ ನಗರಿಯಾಗಿರುವ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಜನರ ಪ್ರಯಾಣದ ಅವಧಿಯಲ್ಲಿ ಹೆಚ್ಚಿನ ಇಳಿಕೆಯಾಗಲಿದ್ದು, ಇದು ಇಲ್ಲಿನ ಔದ್ಯೋಗಿಕ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಘಾಟ್ ಸೆಕ್ಷನ್‌ನ ಅತ್ಯಂತ ಸವಾಲಿನ ಮಾರ್ಗವಾದ ಸುಬ್ರಹ್ಮಣ್ಯ ರಸ್ತೆ ಮತ್ತು ಸಕಲೇಶಪುರ ನಡುವಿನ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೊಳ್ಳಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್ ಭಾರತ್ ನಿಲ್ದಾಣ’ ಯೋಜನೆಯಡಿ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಣಗೊಂಡಿರುವ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!