ಪುತ್ತೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಲೇ ಎಲ್ಲಾ ರಾಜಕೀಯ ಪಕ್ಷಗಳ ಭರ್ಜರಿ ತಯಾರಿ ನಡೆಯುತ್ತಿದೆ. ರಾಜ್ಯಾದ್ಯಂತ ರಾಜಕೀಯ ರಂಗು ಮೇಳೈಸತೊಡಗಿದೆ.
ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಜೆಡಿಎಸ್ ಪಕ್ಷಗಳ ಚಟುವಟಿಕೆ ಬಿರುಸಾಗತೊಡಗಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದೆ. ಈ ಮಧ್ಯೆ, ಹತ್ತೂರಿನಲ್ಲಿಯೂ ಗಮನ ಸೆಳೆಯುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಎಂಬ ಕುತೂಹಲ ಸೃಷ್ಠಿಯಾಗತೊಡಗಿದೆ.
ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಬೂತ್ ಮಟ್ಟದ ಮತದಾರರೂ ಒಂದು ಹೆಸರನ್ನು ಜಪಿಸತೊಡಗಿದ್ದಾರೆ. ಅವರು ಯಾವ ರಾಜಕೀಯ ಪಕ್ಷದಿಂದ ಸ್ಪರ್ಧಿಸಿದರೂ ಅವರ ಗೆಲುವು ಖಂಡಿತಾ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅವರೇ ಅಶೋಕ್ ಕುಮಾರ್ ರೈ.

ಹೌದು, ಕೋಡಿಂಬಾಡಿ ಅಶೋಕ್ ಕುಮಾರ್ ರೈ ಅವರ ಹೆಸರು ಮಿಂಚಿನಂತೆ ಸಂಚರಿಸತೊಡಗಿದೆ. ಪ್ರತೀ ರಾಜಕೀಯ ಪಕ್ಷಗಳಲ್ಲಿಯೂ ಅಶೋಕ್ ರೈ ಹೆಸರು ಜಪಿಸಲ್ಪಡುತ್ತಿದೆ. ಇದಕ್ಕೆ ಕಾರಣ ಅವರ ಸಮಾಜ ಸೇವೆ ಎಂಬುದರಲ್ಲಿ ಎರಡು ಮಾತಿಲ್ಲ. ಕೊನೇಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶೋಕ್ ರೈ ಕಣಕ್ಕಿಳಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಲೆಕ್ಕಾಚಾರ ಪ್ರಕಾರ ಅಶೋಕ್ ರೈಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ.
ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರೂ, ಮಠಂತಬೆಟ್ಟು, ಶಾಂತಿನಗರ, ಬೆಟ್ಟಂಪಾಡಿ, ಪಾಣಾಜೆ, ರಣಮಂಗಲ, ನಿಡ್ಪಳ್ಳಿ, ಮಾಮೇಶ್ವರ ಸಹಿತ ಹಲವೆಡೆಯ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ರೂವಾರಿಯೂ, ಕಂಬಳ ಕೂಟದ ಸಂಘಟಕರೂ, ಅಡಿಕೆ ಬೆಳೆಗಾರರ ಹಿತರಕ್ಷಣೆಯ ಹೋರಾಟಗಾರರೂ, ಪುತ್ತೂರು ಜಿಲ್ಲೆ ಆಗಬೇಕು ಎಂದು ಹೋರಾಟ ರೂಪಿಸಿರುವವರೂ ಆಗಿರುವ ಅಶೋಕ್ ರೈಯವರಿಗೆ ತನ್ನದೇ ಆದ ಅಭಿವೃದ್ಧಿ ಕಾರ್ಯಗಳ ಚಿಂತನೆ ಇದೆ. ಮತದಾರರನ್ನು ಸೆಳೆಯುವ ಆಕರ್ಷಣೆ ಇದೆ. ಈ ಕಾರಣಕ್ಕಾಗಿ ಅಶೋಕ್ ರೈಯವರ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಪುತ್ತೂರಿನ ಮುಂದಿನ ಶಾಸಕರಾಗಿ ಅಶೋಕ್ ರೈ ಆಯ್ಕೆಯಾಗಿಯೇ ಬಿಟ್ಟಿದ್ದಾರೆ ಎಂಬ ವಾತಾವರಣ ಕಾಣುವಂತಾಗಿದೆ.
ಇದಕ್ಕೆ ಪೂರಕ ಎಂಬಂತೆ ಅಶೋಕ್ ರೈ ಅಭಿಮಾನಿ ಬಳಗದವರು ಕಾಂಗ್ರೆಸ್ ಹೈಕಮಾಂಡ್ ಕದ ತಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರು ಅಶೋಕ್ ರೈಯವರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠ ಆಗಿರುವ ಅಶೋಕ್ ರೈಯವರಿಗೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವುದು ಖಚಿತವಾಗಿತ್ತು. ಕೊನೇಯ ಕ್ಷಣದವರೆಗೂ ಅಶೋಕ್ ರೈಯವರ ಹೆಸರು ರೇಸಲ್ಲಿತ್ತು. ಅಂತಿಮವಾಗಿ ಒಕ್ಕಲಿಗ ಸಮುದಾಯದವರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕಾಗಿ ಅಶೋಕ್ ರೈಯವರಿಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಈ ಬಾರಿ ಅಶೋಕ್ ರೈಯವರನ್ನು ಬರಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ತನ್ನ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮೂಲಕ ಸಾವಿರಾರು ಮಂದಿಯ ಮನೆ ದುರಸ್ತಿಗೆ ಸಹಕಾರ, ಮನೆ ನಿರ್ಮಾಣ, ಚಿಕಿತ್ಸೆಗೆ ನೆರವು, ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ ಸಮಾಜದ ತಳಮಟ್ಟದ ಜನರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿರುವ ಅಶೋಕ್ ರೈಯವರನ್ನು ಈ ಮೊದಲೇ ಪಕ್ಷಕ್ಕೆ ಬರಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಬೇಕಿತ್ತು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರೂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಈಗಿಂದಲೇ ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸ ನಡೆಸಬೇಕು ಎಂದು ಪ್ರಮುಖ ಪದಾಧಿಕಾರಿಗಳೂ ಹೇಳುತ್ತಿದ್ದಾರೆ. ಈ ನಡುವೆ ಅಶೋಕ್ ರೈಯವರಿಗೇ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಹಲವರು ವರಿಷ್ಠರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಕಂಡಾಗ ಅಶೋಕ್ ರೈಯವರು ಈ ಸಲ ವಿಧಾನಸಭೆ ಪ್ರವೇಶಿಸುತ್ತಾರೆ ಎಂದು ಲೆಕ್ಕಾಚಾರ ನಡೆಯುತ್ತಿದೆ. ಅಶೋಕ್ ರೈಯವರ ಜತೆ ಜಾತಿ,ಮತ, ಧರ್ಮ, ಪಕ್ಷ ಮರೆತು ಕೆಲಸ ಮಾಡುವ ಯುವಕರ ತಂಡ ಇದೆ. ನಿಸ್ವಾರ್ಥವಾಗಿ ಅಶೋಕ್ ರೈ ಜತೆ ಕೈ ಜೋಡಿಸುವ ನೂರಾರು ಯುವಕರಿದ್ದಾರೆ. ಈ ತಂಡದ ಯುವಕರು ಯಾವುದೇ ಸಮಸ್ಯೆ ಇದ್ದವರ ಬಗ್ಗೆ ತಿಳಿಸಿದರೆ ಅಂತವರ ಸಮಸ್ಯೆ ಪರಿಹರಿಸಿ ಅವರ ಪಾಲಿನ ಧರ್ಮಾತ್ಮನಾಗುತ್ತಿದ್ದಾರೆ. ಇದಕ್ಕೆ ಅಶೋಕ್ ರೈಯವರ ದರ್ಬೆಯ ಕಛೇರಿಯಲ್ಲಿ ನೂರಾರು ಬಡವರು ಸರತಿ ಸಾಲಿನಲ್ಲಿ ನಿಲ್ಲುವುದೇ ಸಾಕ್ಷಿ.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಅನ್ನುವ ತತ್ವದಂತೆ ತನ್ನ ದುಡಿಮೆಯ ಆದಾಯದ ಒಂದಂಶವನ್ನು ಸಮಾಜದ ಬಡವರಿಗೆ, ನೊಂದವರಿಗೆ ನೀಡುತ್ತಿರುವ ಉದ್ಯಮಿ, ಬಹು ಕ್ಷೇತ್ರದ ಸಾಧಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರದ್ದು ಅರ್ಥಪೂರ್ಣವಾದ ಅಪೂರ್ವವಾದ ಸೇವೆ ಎಂಬುದನ್ನು ಮತದಾರರು ಮಾತ್ರ ಅಲ್ಲ ಪಕ್ಷದ ನಾಯಕರೂ ಒಪ್ಪುತ್ತಾರೆ.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಪಿಜಿನಡ್ಕ ಸಂಜೀವ ರೈ ಮತ್ತು ಗಿರಿಜಾ ಎಸ್ ರೈ ದಂಪತಿಯ ಪುತ್ರರಾದ ಅಶೋಕ್ ಕುಮಾರ್ ರೈ ಅವರು ಬಾಲ್ಯದಲ್ಲಿ ಬಡತನದ ಬದುಕನ್ನು ಕಂಡವರು. ಎಳೆಯ ಪ್ರಾಯದಲ್ಲೇ ನಾಯಕತ್ವ ಗುಣ ರೂಢಿಸಿಕೊಂಡ ರೈಗಳು ಶಾಲಾ ಹಂತದಲ್ಲಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡವರು. ಕಷ್ಟಪಟ್ಟು ಹಂತ ಹಂತವಾಗಿ ಮೇಲೇರುತ್ತಾ ಸಿರಿವಂತಿಕೆಯ ಬದುಕಿನ ಭಾಗ್ಯ ಲಭಿಸಿದರೂ ಸರಳ ಬದುಕಿಗೆ ಒಗ್ಗಿಕೊಂಡ ರೈಗಳು ಚಾರಿಟೇಬಲ್ ಟ್ರಸ್ಟ್ ರಚಿಸಿ ಬಡವರ ಪರ ನೆರವು ನೀಡುವ ಕಾಯಕಕ್ಕೆ ಮುಂದಾದವರು. ಟೀಕೆ-ಟಿಪ್ಪಣಿಗಳಿಗೆ, ಅಪಪ್ರಚಾರಗಳಿಗೆ ಬಗ್ಗದೆ, ಕುಗ್ಗದೆ ಗ್ರಾಮ ಗ್ರಾಮಕ್ಕೆ ತೆರಳಿ ಜನರ ಕಷ್ಟ ಸುಖ ಆಲಿಸುತ್ತಿದ್ದಾರೆ. ಬಡವರ ಪಾಲಿಗೆ ಅಶೋಕ್ ರೈ ಬೆಳಕಿನ ದೀವಿಗೆಯಾಗಿ ಗೋಚರಿಸಿದ್ದು ಬೆಳಕಿನಷ್ಟೇ ಸತ್ಯವಾಗಿದೆ.

ಜನಸೇವಾ ಕೇಂದ್ರದ ಮೂಲಕ ಮಂಗಳೂರಿನಲ್ಲಿರುವ 54 ನಿರ್ಗತಿಕ ಏಡ್ಸ್ ಪೀಡಿತ ಮಕ್ಕಳಿಗೆ ದಿನನಿತ್ಯದ ಖರ್ಚನ್ನು ನೀಡುವ ಮೂಲಕ ಅಶೋಕ್ ರೈ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಪ್ರತಿ ವರ್ಷವು ತನ್ನ ಹುಟ್ಟು ಹಬ್ಬವನ್ನು ಈ ಕೇಂದ್ರದಲ್ಲೇ ಆಚರಿಸಿಕೊಳ್ಳುವುದು ಇವರ ವಿಶೇಷತೆಯಾಗಿದೆ. ಇಂತಹ ಕಾಳಜಿಯಿಂದ ರೈಗಳು ಸಮಾಜದ ಎಲ್ಲ ವರ್ಗದ ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಕಷ್ಟ ಅಂದಾಕ್ಷಣ ಸ್ಪಂದನೆಗೆ ಅಶೋಕಣ್ಣ ಇದ್ದಾರೆ ಅನ್ನುವಷ್ಟರ ಮಟ್ಟಿಗೆ ರೈಗಳು ಸಮಾಜದಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಬಡಬಗ್ಗರಿಗೆ, ಕೂಲಿಯಾಳುಗಳಿಗೆ, ವಿಧವೆಯರಿಗೆ, ವೃದ್ಧೆಯರಿಗೆ ಸೀರೆಗಳನ್ನು ದೀಪಾವಳಿ ಹಬ್ಬದ ದಿನಗಳಲ್ಲಿ ನೀಡುವುದು ಹಿಂದೂ ಸಂಪ್ರದಾಯ. ಇಂತಹ ಕಾರ್ಯವೊಂದು ಕೋಡಿಂಬಾಡಿ ರೈ ಎಸ್ಟೇಟ್ನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ತನ್ನ ತಂದೆಯ ಕಾಲದಿಂದ ಆರಂಭಗೊಂಡ ದಾನ ಪರಂಪರೆಯನ್ನು ಅಶೋಕ್ ಕುಮಾರ್ ರೈ ಮುಂದುವರಿಸಿದ್ದಾರೆ.
ದೀಪಾವಳಿ ಹಬ್ಬದಂದು ಬಡವ- ಬಲ್ಲಿದ, ಮೇಲು- ಕೀಳು, ಹಿರಿಯರು-ಕಿರಿಯರೆಂಬ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರಿಗೆ ದಾನ ಮಾಡುತ್ತಿದ್ದಾರೆ. ಕಳೆದ ಬಾರಿ 12,500 ಜನರಿಗೆ ವಸ್ತ್ರದಾನ ಮಾಡಿದ್ದರು. ಈ ಬಾರಿ 30 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ಮಾಡಿರುವ ಆತ್ಮತೃಪ್ತಿಯ ಕ್ಷಣ ಅಶೋಕ್ ರೈ ಅವರದ್ದಾಗಿದೆ. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದೀಪಾವಳಿಯ ಹಬ್ಬದಂದು ಅಶೋಕ್ ರೈಯವರ ಸಾರಥ್ಯದ ಟ್ರಸ್ಟಿನ ದಶಮಾನೋತ್ಸವ, ಫಲಾನುಭವಿಗಳ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಇತಿಹಾಸ ಸೃಷ್ಠಿಸಿದೆ. ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಈ ಬಾರಿ ಪಕ್ಷ ಯಾವುದೇ ಇರಲಿ ನಮ್ಮ ಅಭ್ಯರ್ಥಿ ಅಶೋಕಣ್ಣ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಜನರು ಹೇಳುತ್ತಿರುವ ಮಾತು ವಿಧಾನಸೌಧಕ್ಕೂ ತಲುಪುವ ದಿನ ದೂರವಿಲ್ಲ.









