

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾದ ಪ್ರಹ್ಲಾದ್ ಜೆ.ಶೆಟ್ಟಿ ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯಕ್ತಿಯ ಜೀವನದಲ್ಲಿ ಅಡಿಪಾಯ ಇದ್ದಂತೆ ಹಾಗೂ ಶಿಕ್ಷಣವನ್ನು ಪೂರೈಸಿದ ಬಳಿಕ ನಮ್ಮಲ್ಲಿ ಜವಬ್ದಾರಿಯೂ ಹೆಚ್ಚಾಗುತ್ತದೆ. ಉತ್ತಮ ಅಂಕ ಗಳಿಸಿ, ಹೆತ್ತವರು, ಶಿಕ್ಷಕರು, ಶಾಲೆ ಮತ್ತು ಊರಿಗೆ ಹೆಸರು ತನ್ನಿ ಎಂದು ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ ಇವರು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ನೈತಿಕವಾಗಿ ಹಾಗೂ ಬೌದ್ಧಿಕವಾಗಿ ಬೆಳೆಯಲು ಸಹಕರಿಸಿದೆ. ವಿದ್ಯಾರ್ಥಿಗಳು ಹೆತ್ತವರನ್ನು ಗೌರವಿಸಿ, ರಚನಾತ್ಮಕ ಆಲೋಚನೆಗಳನ್ನು ಬೆಳೆಸಿ, ಉತ್ತಮ ಭವಿಷ್ಯವನ್ನು ನಿಮ್ಮದಾಗಿಸಿ ಎಂದು ಕಿವಿಮಾತು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ, ವಿದ್ಯಾರ್ಥಿಗಳು ಜೀವನ ಕೌಶಲಗಳನ್ನು ಅಳವಡಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಿರಿ ಎಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ.ಪಿ.ಶೆಟ್ಟಿ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾವಂತರಾಗಿ, ವಿನಯವಂತರಾಗಿ ಬಾಳಿ ಹೆತ್ತವರ ಕನಸನ್ನು ನನಸಾಗಿಸಿ ಎಂದು ಹೇಳಿದರು.
ಶಿಕ್ಷಕ-ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳ ಹೆತ್ತವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾನ್ವಿ ಆರ್ ಸ್ವಾಗತಿಸಿ, ಶ್ರವಣ್ ಎಸ್.ಜಿ ವಂದಿಸಿದರು. ವೃದ್ಧಿ ಎ.ಕೊಂಡೆ ಹಾಗೂ ಸ್ಪರ್ಶ ಎನ್.ಜಿ ಕಾರ್ಯಕ್ರಮ ನಿರೂಪಿಸಿದರು.








