Sunday, April 28, 2024
spot_imgspot_img
spot_imgspot_img

ಕುದ್ಕಾಡಿ ಗುರುಪ್ರಸಾದ್ ರೈ ಮನೆಯಲ್ಲಿ ದರೋಡೆ ಪ್ರಕರಣ; ತಿಂಗಳೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದ ಪೊಲೀಸರಿಗೆ ಅಭಿನಂದನೆ ತಿಳಿಸಿದ ಶಾಸಕ ಅಶೋಕ್‌ ಕುಮಾರ್‌ ರೈ

- Advertisement -G L Acharya panikkar
- Advertisement -
vtv vitla

ಪುತ್ತೂರು: ಬಡಗನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಸೆ. 9ರಂದು ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಪೊಲೀಸರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವುದು ಸುಲಭದ ಕೆಲಸವಲ್ಲ ಅದರಲ್ಲೂ ದರೋಡೆ ಮಾಡಿದ ಬಳಿಕ ಆ ತಂಡ ಯಾವುದೇ ಕುರುಹುಗಳನ್ನು ಬಿಟ್ಟು ಹೋಗಿರಲಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿದ್ದ ತಾಯಿ ಮತ್ತು ಮಗ ಬಿಟ್ಟರೆ ಉಳಿದಂತೆ ಒಂದೇ ಒಂದು ಸಾಕ್ಷಿಯೂ ಇರಲಿಲ್ಲ. ಆದರೆ ಜಿಲ್ಲಾ ಎಸ್ಪಿ ಪ್ರಕರಣದ ಪತ್ತೆಗಾಗಿ ತಂಡವನ್ನು ರಚನೆ ಮಾಡಿ ಆ ಮೂಲಕ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಂಡದ ನೇತೃತ್ವ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು, ಪೊಲೀಸ್ ಕಾನ್ಸ್‌ಸ್ಟೇಬಲ್ ಸೇರಿದಂತೆ ತಂಡದಲ್ಲಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬಂದಿಗಳು ಎಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜಿಲ್ಲೆಯ ಪೊಲೀಸ್ ವ್ಯವಸ್ಥೆ ಭದ್ರವಾಗಿದೆ ಎಂಬುದಕ್ಕೆ ಇದುವೇ ದೊಡ್ಡ ಸಾಕ್ಷಿಯಾಗಿದೆ. ಇದು ಜಿಲ್ಲೆ ಮತ್ತು ರಾಜ್ಯ ಪೊಲೀಸ್‌ ವ್ಯವಸ್ಥೆಗೆ ಸಂದ ದೊಡ್ಡ ಗೌರವವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ..?
ನ.6ರಂದು ತಡರಾತ್ರಿ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಗೆ ಐವರು ದರೋಡೆಕೋರರ ತಂಡ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿದ್ದರು.

ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಸುಮಾರು 15 ಪವನ್. ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿದ್ದರು. ಹೋಗುವಾಗ ಗುರುಪ್ರಸಾದ್ ರ ಮತ್ತವರ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದು, ಈ ಮನೆಯ ಋಣ ಹೊಂದಿರುವವರೇ ಯಾರೋ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿತ್ತು.

ಮನೆಯ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆ ಮತ್ತು ಕೇರಳ ಮೂಲದ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ ಎನ್ನುವ ಬಲವಾದ ಸಂಶಯದೊಂದಿಗೆ ಸಂಪ್ಯ ಪೊಲೀಸರ ಒಂದು ತಂಡ ಕೇರಳದಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೆಲ ದಿನಗಳ ಹಿಂದೆ ಸೀತಂಗೋಳಿ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ, ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಕಾಞಂಗಾಡಿನ ನಿವಾಸಿ ಸನಲ್‌, ಸೀತಾಂಗೊಳ್ಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ನಿಸಾರ್‌ ಬಂಧಿತ ಆರೋಪಿಗಳು.

ಈ ಪ್ರಕರಣ ವಸಂತ ಎಂಬಾತನ ಮೇಲೆ ಬದಿಯಡ್ಕ, ಕುಂಬಳೆ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಪ್ರಕರಣ, ಕಿರಣ್‌ ಎಂಬಾತನ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸುಲಿಗೆ ಪ್ರಕರಣ, ಬರ್ಕೆ ಹಾಗೂ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಗಾಂಜಾ ಪ್ರಕರಣ, ಸನಲ್‌ ಕೆ.ವಿ ಎಂಬಾತನ ಮೇಲೆ ಕೇರಳ ರಾಜ್ಯದಲ್ಲಿ ಒಟ್ಟು 15ಪ್ರಕರಣಗಳಾಗಿದ್ದು, ನಾಲ್ಕು ಪ್ರಕರಣಗಳಲ್ಲಿ 9ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ.

ಮಹಮ್ಮದ್‌ ಫೈಝಲ್‌ ಮತ್ತು ಅಬ್ದುಲ್ ನಿಸಾರ್‌ 2022ರಲ್ಲಿ ಪುತ್ತೂರು ಗ್ರಾ.ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿಯಲ್ಲಿ ವೃದ್ಧೆಯ ಚೈನ್‌ ಎಳೆದ ಪ್ರಕರಣ ಹಾಗೂ ಕುದ್ದುಪದವಿನ ಪೆಟ್ರೋಲ್‌ ಬಂಕ್‌ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದನು.

ಇನ್ನೂ ಈ ಪ್ರಕರಣ ಆರೋಪಿ ಸುಧೀರ್‌ ಪೆರುವಾಯಿ ಎಂಬಾತ ಈ ಹಿಂದೆ ಕಾಳುಮೆಣಸು ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಗುರುಪ್ರಸಾದ್‌ ರೈ ಅವರಿಗೆ ಸಂಬಂಧಿಯೋರ್ವರ ಮೂಲಕ ಪರಿಚಯವಾಗಿ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.

ವರ್ಷಗಳ ಹಿಂದೆ ಗುರುಪ್ರಸಾದ್ ರೈಯವರ ಮನೆಗೆ ವಾಹನವೊಂದರಲ್ಲಿ ಚಾಲಕನಾಗಿ ಬಂದಿದ್ದ ಸುಧೀರ್ ಪೆರುವಾಯಿ ಎಂಬಾತ ಗುರುಪ್ರಸಾದ್ ರೈಯವರ ಮನೆಯ ವಿಷಯವನ್ನು ತಿಳಿದುಕೊಂಡು ದರೋಡೆ ತಂಡಕ್ಕೆ ಮಾಹಿತಿ ನೀಡಿ ಬಳಿಕ ಆತನೂ ಸೇರಿ ತಂಡ ಈ ಕೃತ್ಯ ಎಸಗಿದೆ. ಕೃತ್ಯ ಎಸಗುವ ಮೊದಲ ದಿನ ರಾತ್ರಿ ತಂಡವೊಂದು ರಾತ್ರಿ ವೇಳೆ ಗುರುಪ್ರಸಾದ್ ರೈಯವರ ಮನೆಯ ಬಳಿ ಬಂದು ಬಾಗಿಲು ಬಡಿದು ಹೋಗಿದ್ದರು.

ಕೆಲವು ವರ್ಷಗಳ ಹಿಂದೆ ಇಡೀ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸುವಂತಹ ಪೆರ್ಲ ಜಬ್ಬಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಚ್ಚಂಬಳ ರವಿ ಜೀವಾವಧಿ ಶಿಕ್ಷೆಗೆ ಒಳಪಟ್ಟು 12 ವರ್ಷಗಳಿಂದ ಕೇರಳ ಕಾರಾಗೃಹದಲ್ಲಿದ್ದು, ಪೆರೋಲ್ ಮೇಲೆ ಬಂದು ಈ ಪ್ರಕರಣದಲ್ಲಿ ವಾಹನ ಕೊಟ್ಟ ಆರೋಪವಿದೆ. ಬಳಿಕ ಮತ್ತೆ ಕಾರಾಗೃಹಕ್ಕೆ ವಾಪಾಸಾಗಿದ್ದು ಆತನನ್ನು ಈ ಪ್ರಕರಣದಲ್ಲಿ ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ. ಈತ ಸೇರಿದಂತೆ ಒಟ್ಟು ಏಳು ಮಂದಿ ಸೇರಿ ದರೋಡೆ ಎಸಗಿದ್ದು ಈ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪುತ್ತೂರು ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಅವರ ಉಪಸ್ಥಿತಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಸ್ಪಿ ಸಿ.ಬಿ ರಿಷ್ಯಂತ್ ನಿರ್ದೇಶನದಲ್ಲಿ ಡಿವೈಎಸ್‌ಪಿ ಗಾನ ಪಿ ಕುಮಾರ್‌ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಸಿನಿಮೀಯ ರೀತಿಯಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!