ಮಡಿಕೇರಿ: ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಗೆ ಅಶ್ಲೀಲ ಕಮೆಂಟ್ ಮಾಡಿದಾತನನ್ನು ಪೊಲೀಸರು ಬಂಧಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಬಂಧಿತನನ್ನು ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ನಿವಾಸಿ ಗಂಗಾಧರ ಜಮಾದಾರಕನಿ(22) ಎಂದು ಗುರುತಿಸಲಾಗಿದೆ.
ಕೊಡಗಿನ ಮಹಿಳೆಯೊಬ್ಬರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದರು. ಈ ಫೋಟೋಗೆ ಬೆಳಗಾವಿ ಜಿಎಂಜಿ ಎಂಬ ಫೇಸ್‌ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡ ಮಹಿಳೆ ದೂರು ನೀಡಿದ ಹಿನ್ನಲೆಯಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ತನಿಖೆ ಕೈಗೊಂಡ ಸೆನ್ ಪೊಲೀಸ್ ಠಾಣೆಯ ಡಿಎಸ್ ಪಿ ರವಿ, ಪಿಎಸ್ ಐ ರವೀಂದ್ರ ಮತ್ತು ಸಿಬ್ಬಂದಿ ಪತ್ತೆ ಕಾರ್ಯ ನಡೆಸಿದ್ದು ತನಿಖೆ ವೇಳೆ ಬೆಳಗಾವಿ ಜಿಎಂಜಿ ಎಂಬ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಳಗಾವಿಯವನಾಗಿದ್ದು, ಆತನ ಹಿನ್ನಲೆ ಜಾಲಾಡಿದಾಗ ಈತ ಗಂಗಾಧರ ಜಮಾದಾರಕನಿ(22) ಎಂಬುದು ಪತ್ತೆಯಾಗಿದೆ. ಈತ ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ನಿವಾಸಿಯಾಗಿದ್ದು, ಈತನನ್ನು ಬೆಳಗಾವಿಯಲ್ಲಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.