ಪುತ್ತೂರಿನ ರಾಜನೂ ಅಲ್ಲ, ಕ್ಷೇತ್ರದ ಸರ್ವಾಧಿಕಾರಿಯೂ ಅಲ್ಲ; ನಿಮ್ಮ ದರ್ಪ ದುಮ್ಮಾನ ಎಲ್ಲಾ ನಿಮ್ಮ ಮನೆಯಲ್ಲಿ ಇಟ್ಟು ಬನ್ನಿ
ಶಾಸಕ ಅಶೋಕ್ ರೈ ವಿರುದ್ಧ ಅರುಣ್ ಪುತ್ತಿಲ ಬೆಂಬಲಿಗರ ಆಕ್ರೋಶ…!



ಪುತ್ತೂರು: ಪುರುಷರಕಟ್ಟೆ-ಆನಡ್ಕ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ಹೇಳಿಕೆ ವಿರುದ್ಧ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಸಮಸ್ಯೆ ಕುರಿತು ಗ್ರಾಮಸ್ಥರೊಂದಿಗೆ ತೆರಳಿ ಇಂಜಿನಿಯರ್ ಜೊತೆ ಚರ್ಚಿಸಿ ಮನವಿ ಸಲ್ಲಿಸಲಾಗಿತ್ತು. ಮರುದಿನ ಗ್ರಾಮದ ಪಿಡಿಓ ರವರು ಸ್ಥಳಕ್ಕೆ ಬಂದು ಜನರ ಕಷ್ಟ ಆಲಿಸಿ ಬೇಗನೆ ರಸ್ತೆ ಯೋಗ್ಯವಾಗುವಂತೆ ಮಾಡುವ ಭರವಸೆ ನೀಡಿದ್ದರು. ಈ ಬೆನ್ನಲ್ಲೇ ಶಾಸಕರು ನೀಡಿರುವ ಹೇಳಿಕೆಯು ಪುತ್ತೂರಿನ ಪ್ರತಿಯೊಬ್ಬ ಜನಸಾಮಾನ್ಯನಿಗೆ ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ರವರು 63,000 ಮತ ಪಡೆದು ಪುತ್ತೂರಿನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಕೊಟ್ಟ ಮನವಿಯ ರಸ್ತೆಯನ್ನು ಅಭಿವೃದ್ಧಿ ಮಾಡಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ. ಹಣ ಏನು ನಿಮ್ಮ ಮನೆಯಿಂದ ತರೋದಾ? ಅಥವಾ ನಿಮ್ಮ ಟ್ರಸ್ಟಿಂದ ತರೋದಾ? ಜನರು ಕಟ್ಟಿದ ತೆರಿಗೆಯಿಂದ ಪ್ರತಿಯೊಂದು ಕ್ಷೇತ್ರ ಅಭಿವೃದ್ಧಿ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಪಿಡಿಓ, ಇಂಜಿನಿಯರ್, ಗುತ್ತಿಗೆದಾರರಲ್ಲಿ ಮಾತನಾಡಬಾರದು ಎಂದರೆ ಅವರು ನಿಮ್ಮ ಮನೆ ಕೆಲಸದವರ ಅಥವಾ ಸರ್ಕಾರಿ ನೌಕರರಾ? ಪುತ್ತೂರನ್ನು ಏನು ನೀವು ದತ್ತು ಪಡೆದಿದ್ದೀರಾ? ರಾಮ್ ಭಟ್, ಸೊರಕೆ, ಶಕುಆಕ್ಕ, ಮಲ್ಲಿಕಾ ಪ್ರಸಾದ್, ಮಟ್ಟಂದೂರು ಕಾಲದಲ್ಲಿ ಏನು ಪುತ್ತೂರು ಅಭಿವೃದ್ಧಿಯೇ ಆಗಿಲ್ವಾ? ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.
ಬೊಳುವಾರು–ಹಾರಾಡಿ ರಸ್ತೆ ಕಾಮಗಾರಿಯಲ್ಲಿ ಕಾಂಕ್ರೀಟ್ ಬಳಿಕ ನಿರ್ಮಿಸಿರುವ ಮೋರಿ ಅವೈಜ್ಞಾನಿಕವಾಗಿದೆ ಎಂದು ಪ್ರಶ್ನಿಸಿರುವುದು ಹಾಗೂ ಲಘು ವಾಹನಗಳ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಿದ ಬಳಿಕವೂ ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಹಾಕದಿರುವ ಬಗ್ಗೆ ಸಾರ್ವಜನಿಕರ ಅಪೇಕ್ಷೆಯಂತೆ ಧ್ವನಿ ಎತ್ತಿರುವುದನ್ನು ಅಭಿವೃದ್ಧಿ ವಿರೋಧ ಎಂದು ಬಿಂಬಿಸುವುದು ಸರಿಯಲ್ಲ, ಅರುಣಣ್ಣ ಅವರು ಅಭಿವೃದ್ಧಿ ವಿರೋಧಿಸಿದ್ದಾರೆ ಎನ್ನುವುದಕ್ಕೆ ಒಂದೇ ಒಂದು ಕ್ಲಿಪ್ಪಿಂಗ್ ಇದ್ದರೂ ಬಿಡುಗಡೆ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಮೊದಲು ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಅರಿತುಕೊಳ್ಳಬೇಕು. ಪುತ್ತೂರಿನ ರಾಜನೂ ಅಲ್ಲ, ಕ್ಷೇತ್ರದ ಸರ್ವಾಧಿಕಾರಿಯೂ ಅಲ್ಲ. ಪುತ್ತೂರಿನಲ್ಲಿ ಅಧಿಪತಿ ಒಬ್ಬನೇ, ಅದು ಶ್ರೀ ಮಹಾಲಿಂಗೇಶ್ವರ ಎಂಬುದಾಗಿ ಪುತ್ತಿಲ ಬೆಂಬಲಿಗರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.








