


ಬಂಟ್ವಾಳ: ಶಬರಿಮಲೆ ಯಾತ್ರೆ ಮುಗಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಸ್ವಗ್ರಾಮಕ್ಕೆ ಮರಳುತ್ತಿದ್ದ ಯಾತ್ರಾರ್ಥಿಗಳ ವಾಹನಕ್ಕೆ ಕೇರಳದಲ್ಲಿ ಲಾರಿ ಡಿಕ್ಕಿಯಾದ ಪರಿಣಾಮ, ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ 15 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕನನ್ನು ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ, ಸಿದ್ದಕಟ್ಟೆ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಲಕ್ಷ್ಮೀಶ ಪೂಜಾರಿ (15) ಎಂದು ಗುರುತಿಸಲಾಗಿದೆ.
ಅಪಘಾತದ ವಿವರ
ಲಕ್ಷ್ಮೀಶ ಪೂಜಾರಿ ಅವರು ಜನವರಿ 7ರಂದು ತಂದೆ ಅಶೋಕ್ ಪೂಜಾರಿ ಹಾಗೂ ಗ್ರಾಮದ ಐವರು ಯಾತ್ರಾರ್ಥಿಗಳೊಂದಿಗೆ ಇನ್ನೋವಾ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು. ಜನವರಿ 9ರ ಶುಕ್ರವಾರ ರಾತ್ರಿ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ ಬಂಟ್ವಾಳಕ್ಕೆ ಮರಳುತ್ತಿದ್ದ ಸಂದರ್ಭ, ಕೇರಳದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಬಳಿ ಅವರ ಕಾರು ತಾಂತ್ರಿಕ ದೋಷದಿಂದ ರಸ್ತೆ ಬದಿಯಲ್ಲಿ ನಿಂತಿತ್ತು.
ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಕಾರಿನ ಬಾನೆಟ್ ತೆರೆಯಲಾಗಿದ್ದು, ಚಾಲಕ ಸೇರಿದಂತೆ ಆರು ಮಂದಿ ರಿಪೇರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಅಶೋಕ್ ಪೂಜಾರಿ ಅವರು ಮಾತ್ರ ಕಾರಿನ ಒಳಗೇ ಕುಳಿತಿದ್ದರು.
ಅದೇ ಸಮಯದಲ್ಲಿ ಹಿಂಬದಿಯಿಂದ ಅತೀವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿದ್ದವರು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಬಾಲಕ ಲಕ್ಷ್ಮೀಶ ಲಾರಿಯ ಚಕ್ರದ ಅಡಿಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಒಬ್ಬರ ಸ್ಥಿತಿ ಗಂಭೀರ
ಅಪಘಾತದಲ್ಲಿ ವರದರಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇತರ ಯಾತ್ರಾರ್ಥಿಗಳಾದ ಸಂತೋಷ್ ಪೂಜಾರಿ, ಸಚಿನ್, ಗೋಪಾಲ ಪೂಜಾರಿ ಹಾಗೂ ಕಿರಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಬರಿಮಲೆ ಯಾತ್ರೆ ಮುಗಿಸಿ ಸಂತೋಷದಿಂದ ಮನೆಗೆ ಮರಳಬೇಕಿದ್ದ ಬಾಲಕ ಅಪಘಾತಕ್ಕೆ ಬಲಿಯಾದ ಘಟನೆ ಕುರಿಯಾಳ ಗ್ರಾಮದಲ್ಲಿ ಆಘಾತ ಹಾಗೂ ಶೋಕದ ವಾತಾವರಣವನ್ನು ಸೃಷ್ಟಿಸಿದೆ.








