




ಅಳಿಕೆ, ಡಿ.26: ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆ ಇದರ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಡಿಸೆಂಬರ್ 26ರಂದು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್ ಪ್ರಭು, ಸಾಯಿ ಪ್ರತಿನಿಧಿಗಳಾದ ನಾವೆಲ್ಲರೂ ಸಮಾಜಕ್ಕೆ ಮಾದರಿಯಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಇದ್ದರೂ ಉತ್ತಮ ವ್ಯಕ್ತಿಗಳಾಗಲು ಸ್ಪರ್ಧೆ ಇಲ್ಲ; ಎಲ್ಲರೂ ಉತ್ತಮ ಪ್ರಜೆಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಅಳಿಕೆಯ ಕಲಿಕಾ ಕ್ರಮವನ್ನು ಅವರು ಶ್ಲಾಘಿಸಿದರು.
ವಿಟ್ಲ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ವೀರಣ್ಣ ಅತಿಥಿಗಳಾಗಿ ಭಾಗವಹಿಸಿ, ಅರಣ್ಯ ಹಾಗೂ ಅರಣ್ಯ ಜೀವಿಗಳ ರಕ್ಷಣೆಯ ಮಹತ್ವವನ್ನು ತಿಳಿಸಿದರು. ಜೊತೆಗೆ ಅರಣ್ಯ ಇಲಾಖೆಯಿಂದ ಆಯ್ಕೆಯಾಗುವ ಶಾಲೆಗಳಿಗೆ ಉಚಿತ ಪ್ರವಾಸ ವ್ಯವಸ್ಥೆಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ., ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಗೀತಾ ಟಿ. ಶೆಟ್ಟಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ಇದರ ಮ್ಯಾನೇಜಿಂಗ್ ಟ್ರಸ್ಟೀ ಕೆ.ಎಸ್. ಕೃಷ್ಣ ಭಟ್ ವಹಿಸಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್., ಆಡಳಿತಾಧಿಕಾರಿ ಜನಾರ್ಧನ ನಾಯಕ್ ಎಸ್. ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಈಶ್ವರ ನಾಯಕ್ ಎಸ್. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ ವಂದಿಸಿದರು. ಅನುರಾಧ ಎಸ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುವಾಸಿನಿ ಆರ್. ರೈ, ಲತಾ ಸಿ., ಅನುಲಾ ಬಿ. ರೈ, ಸುಮಲತಾ ಸಿ., ವಿಜಯಲಕ್ಷ್ಮೀ ಕೆ., ಜಯಶ್ರೀ ಬಿ., ಮಾಧುರಿ ಎನ್.ಎಂ., ಸ್ವಾತಿ ವಿ. ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿಗಳ ಪೋಷಕರು ಹಾಗೂ ಎಸ್.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.








