Monday, April 29, 2024
spot_imgspot_img
spot_imgspot_img

ಮನ ಮುರಿವ ಮಾತುಗಳು

- Advertisement -G L Acharya panikkar
- Advertisement -
driving

“ಮನಸ್ಸಿನ ನ್ಯಾಯಾಲಯದಲ್ಲಿ ಮನಸಾಕ್ಷಿಯೆ ನ್ಯಾಯಾದೀಶ”. ನ್ಯಾಯವಿಲ್ಲದ ವಿಷಯಗಳೆಲ್ಲವೂ ಬೆಳೆ ಬೆಳೆಯದ ಬರಡು ಭೂಮಿ ಇದ್ದ ಹಾಗೆ. ಮನಸ್ಸಿಲ್ಲದ ಕಾಯಕ ಯಾವಾಗಲೂ ಕಳೆಯಿಲ್ಲದೆ,ಶುಷ್ಕವಾಗಿ ಕಾರ್ಯಾಚರಿಸುತ್ತದೆ. ಮನದ ಸರ್ವ ಬದಲಾವಣೆಗಳು, ನೀವು ಕೇಳಿದ ಮತ್ತು ಹೇಳಿದ ಮಾತುಗಳ ಪ್ರತಿಕ್ರಿಯೆ ಅಷ್ಟೇ.

ಮುಖ ಶರೀರದ ಭೌತಿಕ ಕನ್ನಡಿಯಾದರೆ ಮಾತು ಅದರ ಶುಭ್ರತೆ. ಶುದ್ಧವಿಲ್ಲದ ಮಸೂರದೊಳಗೆ ಬಿಂಬದ ಪ್ರತಿಫಲನ ಹೇಗೆ ಸಾಧ್ಯ. “ಮಾತು ಮುತ್ತಿನ ಹಾರದಂತಿರಬೇಕು, ಮಾತು ಬಲ್ಲವನಿಗೆ ಜಗಳವಿಲ್ಲ” ಎಲ್ಲವುಗಳನ್ನು ಒಪ್ಪೋಣ. ಆದರೆ ಅಪ್ರೀಯವಾದ ಸತ್ಯವನ್ನಾಡಿ ಸುಮ್ಮನೆ ನಿಮ್ಮ ಮನ ನೋಯಿಸಿಕೊಳ್ಳುತ್ತೀರಾ? ಹಾಗೆಂದು ಪ್ರಿಯವಾದ ಅಸತ್ಯಗಳನ್ನಾಡಿ ನೀವೂ ಸುಳ್ಳುಗಾರನಾಗುತ್ತೀರಾ? ಇವೆರಡೂ ಕೂಡ ಮಾತಾನ್ನಾಡುವವರು ಸದಾ ಎದುರಿಸುತ್ತಿರುವ ಎರಡು ಮೂಲಭೂತ ಪ್ರಶ್ನೆಗಳು ಮತ್ತು ಹೆಚ್ಚಾಗಿ ನಾವೆಲ್ಲಾ ಮಾಡುವುದೇ ಇವೆರಡರಲ್ಲಿ ಎರಡನೆಯದ್ದು.

“ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ ” ಮಾಡುವ ಕಾಯಕದೊಳಗೆ ಒಮ್ಮತದಿಂದ ಬದುಕಬೇಕೋ ಕಡ್ಡಾಯವಾಗಿ ಮೇಲಿನ ಎರಡರ ಜೊತೆಗೆ ಮಸಾಲೆಯಾಗಿ ಬಣ್ಣದ ಮಾತು, ಮತ್ತು ಕೃತಕ ನಗು ಇರಬೇಕು. ಇಲ್ಲವಾದರೆ ಆದರಿಸುವವರೇ ಇರುವುದಿಲ್ಲ, ಇದನ್ನು ಮಾಡದೆ ಸತ್ಯ ಸಂದತೆ ಎಂದು, ಇದ್ದುದನ್ನು ಇದ್ದಷ್ಟೇ ಮಾತನಾಡುವುದುದರಿಂದ ಒಬ್ಬಂಟಿಯಾಗಿರಬೇಕಾಗುತ್ತದೆ.

ಜ್ಞಾನಿಗಳು , ಪ್ರಬುದ್ಧ (mature) ವ್ಯಕ್ತಿಗಳಾಗಿರುವವರು , ಎಲ್ಲಾ ತಿಳಿದಿದ್ದರೂ ಏನೂ ಅರಿಯದವರಂತೆ ನಾಟಕ ಮಾಡಲು ತಿಳಿಯಬೇಕು.ಅಂದರೆ ಬೇಡಿ ಬರಬೇಕೆಂಬ ಅಹಂ (ego) ಇರಬೇಕು. ಈಗಿನ ಕಾಲಕ್ಕೆ ನಿಮ್ಮ ಈ ಗುಟ್ಟನ್ನೆಲ್ಲ ಬಲ್ಲವರೆ ಹೆಚ್ಚು. ಯಾವುದಾದರು ಕಾರ್ಯ ಆಗಲೇ ಬೇಕಾದರೆ ಮಾತ್ರ ನಿಮ್ಮ ‘ಇಗೋ’ ದ ವಿಷಯ ತಿಳಿದರೂ,ನಿಮ್ಮ ಬಳಿ ಬಂದಾರು, ಇಲ್ಲವಾದರೆ ನಿಮ್ಮ ದೊಡ್ಡತನ ನಿಮಗಾಯಿತೆಂದು ನಿಮ್ಮನ್ನು ಅಳೆದು ಉಚಿತವಾಗಿ ಊರೆಲ್ಲ ನಿಮ್ಮ ಬಗ್ಗೆ ಗುಪ್ತವಾಗಿ ಪ್ರಚಾರ ಮಾಡುತ್ತಾರೆ ಅಷ್ಟೇ. ಅದನ್ನು ಕೇಳಿ ನಿಮ್ಮ ಮನ ಕಲಕುತ್ತದೆ ಅವನಿಗೆ ಪ್ರಚಾರದ ತೃಪ್ತಿ ಸಿಗುತ್ತದೆ.

ನಿಮಗೆ ಎಲ್ಲರೂಳಗೊಂದಾಗಿ ಒಳ್ಳೆಯವನೆಂದು ಇರಬೇಕೋ ಒಬ್ಬರಿಂದೊಬ್ಬರ ವಿಷಯಗಳನ್ನು ಬಣ್ಣ ಹಚ್ಚಿ ಅವರಿಗೊಪ್ಪುವಂತೆ ಮಾತಾನ್ನಾಡುವ ಅದ್ಭುತ ಕಲೆ ನಿಮ್ಮದಾಗಿರಬೇಕು. ಆದರೆ ನಿಮ್ಮ ಈ ತೆರನಾದ ಮಾತುಗಳು ಒಮ್ಮೆಗೆ ಇತ್ತಂಡಗಳಿಗೂ ಹಿತವೆನಿಸಿ ನಿಮ್ಮ ತಾಳಕ್ಕೆ ಸರಿಯಾಗಿ ಕುಣಿಯುವಂತೆ ಮಾಡಬಹುದು.ಆದರೆ ನಿಮ್ಮ ಕೃತ್ಯ ನಿಮ್ಮ ಶುದ್ಧ ಆತ್ಮತೃಪ್ತಿಗೆ ಸರಿಯೋ ? ನಿಮ್ಮೊಳಗಿನ ಗೋಪ್ಯತೆಯ ಕಡತ ಹೆಚ್ಚಿಸಿ ಕೊನೆಗೊಂದು ದಿನ ಇಬ್ಬರಿಂದಲೂ ಮನಶಾಪಕ್ಕೆ ತುತ್ತಾಗುವುದಂತೂ ಖಂಡಿತ.

ಇನ್ನೊಂದು ಎಲ್ಲರೀಗೂ ಅಸ್ತು.. ಅಸ್ತು… ಅನ್ನೋ ತಥಾಸ್ತು ಪಾರ್ಟಿ. ಅವರ ಅಸ್ತು ಸುಮ್ಮನೆ ತೋರಿಕೆಗೆ.ಯಾವುದನ್ನೂ ಪರೀಶೀಲಿಸದೇ ತನ್ನವರು ಎಂಬವರ ಪರವಾಗಿ ಮೌನ ಕಾಯ್ದು ಇರುವವರು. ಹೀಗಿರುವವರು ಹೆಚ್ಚಾಗಿ ಯಾವಾಗಲೂ ಎರಡು ಪಂಗಡದ ಜೊತೆ ವಿಭಾಗೀಯ ನೀತಿ ಅನುಸರಿಸುತ್ತಾರೆ.

‘ಹೇಳುವುದು ವೇದ ಇಕ್ಕುವುದು ಗಾಳ’. ಅನ್ನೋರು ಮತ್ತೊಂದು ಕಡೆ.ಇವರದು ಆಚಾರಕ್ಕೊಂದು ನುಡಿಯಲ್ಲೊಂದು ತದ್ವಿರುದ್ಧವಾದ ನಡೆಗಳು. ಸ್ಥಿತಿಗೊಂದು ಮಾತುಗಾರಿಕೆ ಮಾತ್ರ.ಮಾತು ಮಾತ್ರ ಸಿಹಿ ಅದನ್ನು ಕೇಳಿ ಅವರನ್ನು ನಂಬಿದಿರೋ ನೀವು ಕೆಟ್ಟಿರಿ.

ಮಾತಿನ ಬೆಲೆಯೇ ಅರಿಯದ ಬೊಗಳೆ ನಾಯಕರು…ಬಹಳಷ್ಟು ಸಿಗುತ್ತಾರೆ.ಜಸ್ಟ್ ಟೈಂಪಾಸ್ಗಾಗಿ ರೈಲು ಬಿಡುವವರು. ಕೇಳಿ ನಿಮ್ಮ ತಲೆಬಿಸಿ ಕಡಿಮೆ ಮಾಡಿ ಕೊಳ್ಳಬಹುದಷ್ಟೇ ಬಿಟ್ರೆ ನಿಮ್ಮ ಅಮೂಲ್ಯ ಸಮಯ ಹರಣವಾಗುವುದು. ಆದರೆ ಅಂತ ಮಾತುಗಾರರು ಸ್ವಾರ್ಥಪರರು. ತಮ್ಮತನಕ್ಕೆ ಅನ್ಯಾಯ ಆಗದಂತೆ ನಿಮಗೆ ನಷ್ಟ ಮಾಡಿಬಿಡುತ್ತಾರೆ.

ಇನ್ನುಮಾತಿನಲ್ಲಿ ಕಠೋರ ಆದರೆ ಹೃದಯವಂತರು. ನಿಮ್ಮಿಂದ ಶರಣಾಗತಿ ಬಯಸುತ್ತಾ, ಇದೆಯೆಂದರೆ ಮಾತ್ರ ನಿಮಗೆ ಪುಕ್ಸಟೆ ಸಲಹೆ ನೀಡುವವರು ಮತ್ತು ಅನುಕಂಪ ತೋರುವವರು ಆದರೆ ಅಂತಹವರು ನಿಮಗರಿವಿಲ್ಲದಂತೆ ನಿಮ್ಮನ್ನು ಮಾತಿನಲ್ಲಿ ಅವರ ಒಕ್ಕಲಿಗರನ್ನಾಗಿಸುತ್ತಾರೆ.

ತನ್ನ ಬೇಳೆ ಬೇಯಿಸಿಕೊಳ್ಳಲು ನಯವಾಗಿ ನಿಮ್ಮ ಪರ ಮತ್ತು ವಿರೋಧಿಗಳನ್ನು ನಿಮ್ಮಲ್ಲಿ ಹೀಯಾಳಿಸಿ, ಅವರ ಸಣ್ಣ ಸಾಸಿವೆ ದುರ್ಗುಣಗಳನ್ನು ಕುಂಬಳವಾಗಿಸಿ ನಿಮ್ಮಿಂದ ಅವರ ಗುಣಗಾನ ಮಾಡಿಸಿ ಅದನ್ನು ಆ ವ್ಯಕ್ತಿಗಳಿಗೆ ಚಾಡಿ ಹೇಳಿ ತಾನು ಒಳ್ಳೆಯ ವ್ಯಕ್ತಿಗಳಾಗಿ ಮಿಂಚುವ ಕೆಟ್ಟ ಬ್ರಿಟಿಷ್ ಮೈಂಡ್ ಸೆಟ್ಟಿನವರು.

ನಯವಾಗಿ ಮಾತನಾಡಿ ತನ್ನ ಬುಟ್ಟಿಗೆ ಹಾಕಿಕೊಂಡು, ತನ್ನ ಕಾಯಕ್ಕೆ ಕಲ್ಪವನ್ನು ಮಾಡಿಕೊಂಡು ಅವರಿಂದ ತನು -ಮನ- ಧನಗಳ ಕೊಳ್ಳೆ ಹೊಡೆಯುವ ನಯ ವಂಚಕರು ಈಗಿನ ದಿನಗಳಲ್ಲಿ ಬಲು ಹೆಚ್ಚು. ಇನ್ನು ಮಾತು ಕಹಿಯಾಗಿ, ನೇರ ನಡೆ-ನುಡಿ ಹೊಂದಿ, ತನ್ನದು ಸಿಗಲ್ಲ, ನಿಮ್ಮದು ಕೇಳಲ್ಲ ಎಂದು ಇದ್ದು, ಯಾರನ್ನೂ ಅತೀ ಹಚ್ಚಿಕೊಳ್ಳದೆ ಮಿತವಾಗಿ ಇರುವ, ಕಟುಕರಂತೆ ಕಂಡರೂ ವಾಸ್ತವ ಸ್ಥಿತಿಯೊಳಗೆ ಬದುಕುವ ಇವರು ಮೃದುವಾಗಿದ್ದರೂ ಕಠಿಣತೆಯನ್ನು ಕಾಯ್ದುಕೊಂಡಿರುತ್ತಾರೆ.

ಸದಾ ಸಾಂತ್ವಾನ ಹೇಳಿ, ಎಲ್ಲರ ಸುಖ ಕಷ್ಟಗಳನ್ನು ತನ್ನದು ಎಂದೂ ಭಾವಿಸುತ್ತ, ಸರ್ವರೀಗೂ ಆಪತ್ ಕಾಲದಲ್ಲಿ ನೆನಪಾಗುವ, ತನ್ನ ಕಷ್ಟಗಳ ಮರೆತು ಇತರರ ಒಳ್ಳೆತನದಲ್ಲಿ ನೆಮ್ಮದಿ ಕಾಣುವ ಇವರು ಐಶ್ವರ್ಯ ವಂಚಿತರಾಗಿದ್ದರೂ ವಿಶಾಲ ಹೃದಯಿಗಳು. ಇರುವಾಗಲೂ, ಆಳಿದ ಮೇಲೂ ಅಣ್ಣ-ಅಕ್ಕರಾಗಿ ಉಳಿದುಕೊಳ್ಳುವವರು.

ಜಾಣನಿಗೆ ಮಾತಿನ ಪೆಟ್ಟು, ಎಂಬ ಹಾಗೆ ಈ ಜಾಣರು ಸದಾ ಅನುಭವಸ್ತರಿಗೆ ಗೌರವ ನೀಡಿ ನೀಡಿ ಮಾತಿನ ಪೆಟ್ಟು ತಿಂದು ತಿಂದು, ನಂಬಿ ಸೋತು ಹೋದವರೂ, ಆದರ್ಶ ವ್ಯಕ್ತಿಗಳ ಹಾದಿ ಹಿಡಿದ ಮಹಾನುಭಾವರು ಇದ್ದಾರೆ. ಆದರೆ ಇಲ್ಲಿ ಸ್ವಂತಿಕೆ ಕಳೆದುಕೊಂಡು ಸೋತವರೇ ಹೆಚ್ಚು ಕಾಣುತ್ತೇವೆ.

ಹೀಗೆ ಮಾತಿನ ಮಹಿಮೆಗೆ ಪೂರ್ಣ ವಿರಾಮವಿಲ್ಲ. ಒಂದು ಮುಗಿದರೆ ಮತ್ತೊಂದರ ಸೃಷ್ಟಿ. ಇವತ್ತೊಂದು ಅನುಭವವಾದರೆ ನಾಳೆ ಇನ್ನೊಂದು. ಯಾವುದು ಸರಿ ಎಂದು ಕೇಳಿದರೆ ಎಲ್ಲವೂ ಈ ಸಮಾಜಕ್ಕೆ ಸರಿ. ನಾವೂ ಎಲ್ಲಾದರೊಂದು ಕಡೆ ಫಿಕ್ಸ್ ಆಗಿಯೇ ಆಗುತ್ತೇವೆ. ಅದು ಬೇಡ ಇದು ಆದಿತೆಂದರೆ ಒಂದನ್ನು ಕಳೆದುಕೊಳ್ಳುತ್ತೇವೆ. ಎಷ್ಟಾದರೂ ಸತ್ಯ ಧರ್ಮದಲ್ಲಿ ನಡೆಯುತ್ತಿದ್ದ ಎರಡು ತಲೆಮಾರು ಹಿಂದಿನ ಮಾತುಗಾರರ ಮಾತುಗಳಿಗೆ ಪವಿತ್ರತೆ, ನಂಬಿಕೆ ಹೆಚ್ಚಾಗಿತ್ತು ಎಂದಷ್ಟೇ ಹೇಳಲು ಬಯಸುತ್ತೇನೆ.

ರಾಧಾಕೃಷ್ಣ ‘ರಾಮ್ದೇವ್’ ವಿಟ್ಲ

- Advertisement -

Related news

error: Content is protected !!