


ಮಂಗಳೂರು: ಶ್ರೀ ಗುರು ಪಂಡಿತ ಪುಟ್ಟರಾಜ ಸಾಂಸ್ಕೃತಿಕ ಜಾನಪದ ಕಲಾ ತಂಡ (ರಿ) ಸಿಂಧನೂರು ಹಾಗೂ ಅಮರ ಸ್ವರ ಸಂಗಮ ಕರೋಕೆ ಸ್ಟುಡಿಯೋ ಸಿಂಧನೂರು ಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಂಚಿಕೆ 7 ರಲ್ಲಿ ಅಶ್ಮಿತ್ ಎ ಜೆ ಮಂಗಳೂರು ಪ್ರಥಮ ಸ್ಥಾನ ಪಡೆದಿದ್ದಾರೆ.

ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ವಿಭಾಗದವರಿಗೂ ಒಟ್ಟಾಗಿ ನಡೆದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಹಲವಾರು ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪಿನಾಲೆ ಹಂತ ತಲುಪಿದ ಅಶ್ಮಿತ್ ತಮ್ಮ ಉತ್ತಮ ಹಾಡುಗಾರಿಕೆಯೊಂದಿಗೆ ತೀರ್ಪುಗಾರರ ಹಾಗೂ ಎಲ್ಲರ ಗಮನ ಸೆಳೆದಿದ್ದರು. ಅಶ್ಮಿತ್ ಎ ಜೆ ಮಂಗಳೂರು ಪ್ರಥಮ ಸ್ಥಾನದೊಂದಿಗೆ 25,000/- ನಗದು ಹಾಗೂ ಟ್ರೋಫಿ ಜೊತೆಗೆ ವಿನ್ನರ್ ಆಗಿ ಮಿಂಚಿದ್ದಾರೆ.

ಅಶ್ಮಿತ್ ಮೂಲತಃ ದ ಕ ಜಿಲ್ಲೆಯ ಮಂಗಳೂರು ನಿವಾಸಿಯಾಗಿದ್ದು, ಮಂಗಳೂರಿನ ನ್ಯಾಯವಾದಿ ಜಯರಾಮ್ ಹಾಗೂ ಆಶಾ ದಂಪತಿಯ ಸುಪುತ್ರರಾಗಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಗೊಂಝಾಗ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಅಶ್ಮಿತ್ 5 ವರ್ಷದಿಂದಲೇ ಸಂಧ್ಯಾ ಸತ್ಯನಾರಾಯಣ ಇವರಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ.

ಅತೀ ಕಿರಿ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈಯುತ್ತಿರುವ ಇವರು ಸ್ಟಾರ್ ಸಿಂಗರ್ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಹಲವಾರು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಅಶ್ಮಿತ್ ಹಲವಾರು ಬಹುಮಾನ ಸೇರಿದಂತೆ ಪ್ರಶಸ್ತಿ, ಗೌರವಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅತೀ ಕಿರಿ ವಯಸ್ಸಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಇವರು ಗೈದ ಸಾಧನೆಯನ್ನು ಗುರುತಿಸಿ ’ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ’ ಚಂದನ ಸಾಹಿತ್ಯ ವೇದಿಕೆ ಸುಳ್ಯ ’ಕನ್ನಡ ಸಾಂಸ್ಕೃತಿಕ ರತ್ನ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.








