ನವದೆಹಲಿ: ಕೊರೊನಾ ಸಾಂಕ್ರಾಮಿಕ ನಡುವೆ 130 ಕೋಟಿ ಭಾರತೀಯರು ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಆತ್ಮನಿರ್ಭರ ಭಾರತ ನಿರ್ಣಯ ತೆಗೆದುಕೊಳ್ಳಲಾಗಿದೆ. ಇಂದು ಆತ್ಮನಿರ್ಭರ ಭಾರತ 130 ಕೋಟಿ ಭಾರತೀಯರ ಮಂತ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಕನಸನ್ನು ಭಾರತ ನೆರವೇರಿಸುತ್ತದೆ ಎಂಬ ನಂಬಿಕೆ ನನಗಿದೆ. ಭಾರತೀಯರ ಶಕ್ತಿ, ಸಾಮರ್ಥ್ಯ, ಆತ್ಮವಿಶ್ವಾಸದ ಮೇಲೆ ನನಗೆ ನಂಬಿಕೆಯಿದೆ. ನಾವು ಒಂದು ಸಲ ನಿರ್ಧಾರ ತೆಗೆದುಕೊಂಡರೆ ಅದನ್ನು ಮಾಡುವವರೆಗೂ ವಿರಮಿಸುವುದಿಲ್ಲ ಎಂದರು.
ಇವತ್ತು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ ಅಂದ್ರೆ ಅದಕ್ಕೆ ನಮ್ಮ ಸಾವಿರಾರು ಸ್ವತಂತ್ರ್ಯ ಹೋರಾಟಗಾರರು. ಈಗ ಸೇನೆ, ಪೊಲೀಸರು ಹಾಗೂ ಇತರೆ ಭದ್ರತಾ ಪಡೆ ಕಾರಣ ಎಂದು ಹೇಳಿದರು.
ಕೊರೊನಾ ವಾರಿಯರ್ಸ್ ಗೆ ಪ್ರಧಾನಿ ಸೆಲ್ಯೂಟ್:
ನಾವಿಂದು ಕೊರೊನಾ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇಡೀ ದೇಶದ ಪರವಾಗಿ ಕೊರೊನಾ ವಾರಿಯರ್ಸ್ ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಎಲ್ಲ ಆರೋಗ್ಯ ಸಿಬ್ಬಂದಿ ಶ್ರಮವಹಿಸಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶ ಅವರಿಗೆ ಸೆಲ್ಯೂಟ್ ಹೇಳುತ್ತದೆ.
ಆತ್ಮನಿರ್ಭರ ಭಾರತಕ್ಕೆ ಲಕ್ಷಾಂತರ ಸವಾಲು:
ಆತ್ಮನಿರ್ಭರ ಭಾರತಕ್ಕೆ ಲಕ್ಷಾಂತರ ಸವಾಲುಗಳಿವೆ ಎನ್ನುವುದು ನನಗೆ ಗೊತ್ತು. ಜಾಗತಿಕ ಸ್ಪರ್ಧೆಯಿಂದ ಅದು ಇನ್ನೂ ಹೆಚ್ಚಾಗುತ್ತದೆ. ಆದರೆ ಲಕ್ಷಾಂತರ ಸವಾಲುಗಳನ್ನು ಎದುರಿಸಲು ಕೋಟ್ಯಾಂತರ ಪರಿಹಾರ ಕಂಡುಕೊಳ್ಳುವ ಶಕ್ತಿ ಭಾರತಕ್ಕಿದೆ ಎಂದು ಹೇಳಿದರು.
ಆತ್ಮನಿರ್ಭರ ಭಾರತದ ಪ್ರಮುಖ ಆದ್ಯತೆ ಅಂದ್ರೆ ಸ್ವಾವಲಂಬಿ ಕೃಷಿ. ನಮ್ಮ ದೇಶದ ಅನ್ನದಾತರಿಗೆ ಅತ್ಯಾಧುನಿಕ ಮೂಲಸೌಕರ್ಯ ಒದಗಿಸಲು 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ.
ಭಾರತದಲ್ಲಿ 3 ಹಂತಗಳಲ್ಲಿ ಕೊರೊನಾ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ತಜ್ಞರು ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಶುರುವಾಗಲಿದೆ.