

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ಯುವತಿ ಮೇಲೆ ಕ್ಯಾಬ್ ಚಾಲಕನೋರ್ವ ಅತ್ಯಾಚಾರ ನಡೆಸಿದ್ದಾನೆಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಈ ಪ್ರಕರಣ ಸಂಬಂಧ ಜೀವನ್ ಭೀಮಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಆಂಧ್ರ ಪ್ರದೇಶದ ಮೂಲದ ದೇವರಾಜ್ ಎನ್ನಲಾಗಿದೆ. ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ.

ಖಾಸಗಿ ಹೋಟೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ್ರಸ್ತೆ ಯುವತಿ ನಿನ್ನೆ ರಾತ್ರಿ ಸ್ನೇಹಿತರ ಮನೆಗೆ ಔತಣ ಕೂಟಕ್ಕೆ ಹೋಗಿದ್ದಳು. ಇದನ್ನು ಮುಗಿಸಿ ರಾತ್ರಿ ಮಲ್ಲೇಶ್ ಪಾಳ್ಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಯುವತಿ ಮನೆಯ ಬಳಿ ಬಂದಾಗ ಆರೋಪಿ ದೇವರಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇಂದು ಬೆಳಗಿನ ಜಾವ 3 ರಿಂದ 4 ಗಂಟೆಯಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಯುವತಿ ಜೀವನ ಭೀಮಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ನಡೆಸಲು ಮುಂದಾದರು. ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಇನ್ನು ಈ ಪ್ರಕರಣ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ವಿಚಾರಣೆ ವೇಳೆ ಕ್ಯಾಬ್ ಚಾಲಕ ಅತ್ಯಾಚಾರ ನಡೆಸಿಲ್ಲ ಎಂದು ಹೇಳುತ್ತಿದ್ದಾನೆ. ಕ್ಯಾಬ್ ಚಾಲಕ ಮತ್ತು ಸಂತ್ರಸ್ತೆ ನಡುವೆ ಬೆಳಗಿನ ಜಾವ ಡ್ರಾಪ್ ನೀಡುವ ವಿಚಾರದಲ್ಲಿ ಗಲಾಟೆ ಆಗಿದೆ ಎಂದು ಕ್ಯಾಬ್ ಚಾಲಕ ತಿಳಿಸಿದ್ದಾನೆ. ಇನ್ನು ಪ್ರಕರಣ ಕುರಿತು ಸಂತ್ರಸ್ತ ಯುವತಿಯನ್ನು ಮಧ್ಯಾಹ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರದಿ ಬಂದ ಬಳಿಕ ಈ ತನಿಖೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದಿದ್ದಾರೆ.










