



ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕರ ಹಣದ ಬ್ಯಾಗ್ ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳ್ಳತನದ ಬಳಿಕ ಅಮಾಯಕಳಂತೆ ವರ್ತಿಸುತ್ತಿದ್ದ ಮಹಿಳೆ, ಸಿಕ್ಕಿಬಿದ್ದ ನಂತರ ಪೊಲೀಸರ ಮುಂದೆ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.
ನಗರದಲ್ಲಿ ಸಂಚರಿಸುತ್ತಿದ್ದ KA 57 F 6331 ಸಂಖ್ಯೆಯ ಬಿಎಂಟಿಸಿ ಬಸ್‌ಗೆ ಪ್ರಯಾಣಿಕಳಂತೆ ಹತ್ತಿದ್ದ ಮಹಿಳೆ, ನಿರ್ವಾಹಕರ ಗಮನ ಬೇರೆಡೆ ಇದ್ದ ವೇಳೆ ಅವರ ಹಣದ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಅಡಗಿಸಿಕೊಂಡಿದ್ದಾಳೆ ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ಹಣದ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿದ ನಿರ್ವಾಹಕರಿಗೆ ಮಹಿಳೆಯ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ. ಪ್ರಶ್ನಿಸಿದಾಗ ಆಕೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾಳೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದಾಗ, “ನಾನು ಮನೆಗೆ ಹೋಗಬೇಕು… ನನ್ನ ಗಂಡನ ಆರೋಗ್ಯ ಸರಿಯಿಲ್ಲ” ಎಂದು ಹೇಳುತ್ತಾ ಮಹಿಳೆ ಭಾವನಾತ್ಮಕವಾಗಿ ಹೈಡ್ರಾಮಾ ನಡೆಸಿದ್ದಾಳೆ. ಆದರೆ, ಪೊಲೀಸರು ಆಕೆಯ ಚೀಲವನ್ನು ಪರಿಶೀಲಿಸಿದಾಗ ನಿರ್ವಾಹಕರ ಹಣದ ಬ್ಯಾಗ್ ಪತ್ತೆಯಾಗಿದ್ದು, ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಇತ್ತೀಚಿನ ದಿನಗಳಲ್ಲಿ ಬಸ್‌ಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪಿಕ್‌ಪಾಕೆಟ್ ಮತ್ತು ಕಳವು ಪ್ರಕರಣಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಹಣ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.








