ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಔಷಧಿಗೆಂದು ಆಸ್ಪತ್ರೆಗೆ ಬಂದಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಿಜೆಪಿ ಸಕ್ರಿಯ ಯುವ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು (43) ಮೃತಪಟ್ಟ ವ್ಯಕ್ತಿ.
ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಔಷಧಿಗೆಂದು ಅವರು ಇಂದು ಬೆಳಿಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು ಎಂದು ಹೇಳಲಾಗಿದೆ.ಈ ವೇಳೆ ವೈದ್ಯರು ಪರೀಕ್ಷೆ ಮಾಡುವ ಮೊದಲೇ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಜ್ವರದಿಂದ ಬಳಲುತ್ತಿದ್ದ ಪ್ರಕಾಶ್ ಅವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಬಿಜೆಪಿ ಪ್ರಮುಖರು ಬಂಟ್ವಾಳ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ.