


ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಆಚರಣೆ ಸಂಭ್ರಮದಿಂದ ನೆರವೇರಿದ್ದು, 9 ಗಂಟೆಗೆ ಸರಿಯಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ನಂತರ ಪೊಲೀಸರಿಂದ ವಂದನಾ ಗೌರವ ಸ್ವೀಕರಿಸಿ, ಪರೇಡ್ ವೀಕ್ಷಿಸಿದ ರಾಜ್ಯಪಾಲರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ಹಿನ್ನೆಲೆ ಮಾಣೆಕ್ ಷಾ ಪರೇಡ್ ಮೈದಾನ ಸುತ್ತಮುತ್ತ ಸೇರಿದಂತೆ, ನಗರದಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ. ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ.
ಇನ್ನು, ಪರೇಡ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 516 ಜನ ಭಾಗಿಯಾಗಿದ್ದರು. ಅಲ್ಲದೇ ಭದ್ರತೆ ಸೇರಿ 2 ಸಾವಿರ ಪೊಲೀಸರು ಪಾಲ್ಗೊಂಡಿದ್ದರು.








