ವಿಟ್ಲದ ಉಕ್ಕುಡ ದರ್ಬೆಯಲ್ಲಿ ನಡೆದ ಘಟನೆ
ಇಬ್ಬರು ದ್ವಿಚಕ್ರ ವಾಹನ ಸವಾರರ ನಡುವೆ ನಡೆದ ಮಾತಿನ ಚಕಮಕಿ
ವಿಟ್ಲ: ಮುಖ್ಯ ರಸ್ತೆಗೆ ವಾಹನವನ್ನು ಏಕಾಏಕಿ ನುಗ್ಗಿಸಿದ ವಿಚಾರದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬ ಸವಾರ ಇನ್ನೊಬ್ಬ ಸವಾರನಿಗೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ ಘಟನೆ ಉಕ್ಕುಡದ ದರ್ಬೆ ಎಂಬಲ್ಲಿ ನಡೆದಿದೆ.
ಕೇಪು ಗ್ರಾಮದ ಬಡಕೋಡಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ ಅಭಿ ಯಾನೆ ಅಭಿಷೇಕ್ ಹಲ್ಲೆಗೊಳಗಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಖಲೀಮ್ ಎಂಬಾತ ತಲೆಮರೆಸಿಕೊಂಡಿದ್ದಾರೆ.
ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಕಾಸರಗೋಡು -ವಿಟ್ಲ ರಸ್ತೆಯಲ್ಲಿ ಅಭಿ ಯಾನೆ ಅಭಿಷೇಕ್ ತನ್ನ ವಾಹನದಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಆರೋಪಿ ಖಲೀಮ್ ಎಂಬಾತನು ತನ್ನ ಹೋಂಡಾ ಡಿಯೋ ವಾಹನದಲ್ಲಿ ಎಡಬದಿಯ ರಸ್ತೆ ಯಿಂದ ಒಮ್ಮೇಲೆ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದಿದ್ದಾರೆನ್ನಲಾಗಿದೆ. ಈ ಬಗ್ಗೆ ಖಲೀಮ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಖಲೀಮ್ ಎಂಬಾತ ಅಭಿಷೇಕ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೆಲ್ಮೆಟ್ ನಿಂದ ತಲೆಯ ಭಾಗಕ್ಕೆ ಹಾಗೂ ಮುಖದ ಭಾಗಕ್ಕೆ ಹೊಡೆದು ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ್ದಾನೆ ಎಂದು ಗಾಯಾಳು ಅಭಿಷೇಕ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.