ಹೊಸದಿಲ್ಲಿ,: ಮೂರು ತಿಂಗಳೊಳಗಿನ ಮಕ್ಕಳನ್ನು ದತ್ತು ಪಡೆಯುವ ದತ್ತು ತಾಯಂದಿರಿಗೆ ಮಾತ್ರ ಮಾತೃತ್ವ ರಜೆಗೆ ಅವಕಾಶ ನೀಡಿದ್ದ 2020ರ ಸಾಮಾಜಿಕ ಸುರಕ್ಷಾ ಸಂಹಿತೆಯ (ಎಸ್‌ಎಸ್ಸಿ) ಕಲಮ್ಮೊಂದನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ರದ್ದುಗೊಳಿಸಿತು.ದತ್ತು ಸ್ವೀಕಾರವು ಸಂತಾನೋತ್ಪತ್ತಿ ಸಾಯತ್ತತೆಯ ಭಾಗವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತು.

ದತ್ತು ಪಡೆಯಲಾದ ಮಗುವಿನ ವಯಸ್ಸು ಏನೇ ಆಗಿದ್ದರೂ ದತ್ತು ತಾಯಿಗೆ 12 ವಾರಗಳ ಮಾತೃತ್ವ ರಜೆಯನ್ನು ಪಡೆಯುವ ಹಕ್ಕು ಇರಲೇಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಸ್ಪಷ್ಟಪಡಿಸಿತು.ಮೂರು ತಿಂಗಳುಗಳಿಗಿಂತ ಹೆಚ್ಚಿನ ಪ್ರಾಯದ ಮಕ್ಕಳನ್ನು ದತ್ತು ಪಡೆಯುವ ತಾಯಂದಿರಿಗೆ ಮಾತೃತ್ವ ರಜೆಯನ್ನು ನಿರ್ಬಂಧಿಸಿರುವ ಎಸ್‌ಎಸ್ಸಿಯ ಕಲಂ 60(4) ಅವರ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ. ಏಕೆಂದರೆ ಅವರೂ ಮೂರು ತಿಂಗಳುಗಳಿಗಿಂತ ಕಡಿಮೆ ಪ್ರಾಯದ ಮಕ್ಕಳನ್ನು ದತ್ತು ಪಡೆಯುವ ತಾಯಂದಿರಂತೆಯೇ ಹೊಣೆಯನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯವು ಹೇಳಿತು.ಕಲಂ 60(4) ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸಿರುವ ಸಂವಿಧಾನದ 21ನೇ ವಿಧಿಯನ್ನೂ ಉಲ್ಲಂಘಿಸುತ್ತದೆ ಎಂದು ಪೀಠವು ತಿಳಿಸಿತು.ನ್ಯಾಯವಾದಿ ಹಂಸನಂದಿನಿ ನಂದೂರಿ ಅವರು 2021ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ.








