Wednesday, July 22, 2026
spot_imgspot_img
spot_imgspot_img

ಕಳ್ಳತನದ ಶಂಕೆ ನೆಪವಿಟ್ಟು 12 ವರ್ಷದ ದಲಿತ ಬಾಲಕನಿಗೆ ಅಮಾನುಷ ಹಿಂಸೆ: ಪಲ್ವಾಲ್‌ನಲ್ಲಿ ದಾರುಣ ಘಟನೆ

- Advertisement -
- Advertisement -

ಚಂಡೀಗಢ: ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆ ನೆಪವಿಟ್ಟು 12 ವರ್ಷದ ದಲಿತ ಬಾಲಕನನ್ನು ಕ್ರೂರವಾಗಿ ಹಿಂಸಿಸಿ, ಅಕ್ರಮವಾಗಿ ಹಲವು ಗಂಟೆಗಳ ಕಾಲ ಬಂಧನದಲ್ಲಿಟ್ಟಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ 10 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಈವರೆಗೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಡಿ.10ರಂದು ರಾತ್ರಿ ನಡೆದ ಈ ಘಟನೆಯಲ್ಲಿ, ಬಾಲಕನ ಕೈ–ಕಾಲುಗಳನ್ನು ಕಟ್ಟಿ ವಿದ್ಯುತ್ ಶಾಕ್ ನೀಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಲೈಂಗಿಕ ದೌರ್ಜನ್ಯಕ್ಕೂ ಒಳಪಡಿಸಿದ್ದಾಗಿ ಬಾಲಕ ಹೇಳಿಕೆ ನೀಡಿದ್ದಾನೆ. ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಬಡ ಕುಟುಂಬದ ಹಿನ್ನೆಲೆಯ ಈ ಬಾಲಕ, ಕುಟುಂಬ ನಿರ್ವಹಣೆಗೆ ಸಹಾಯವಾಗಲೆಂದು ಮದುವೆ ಮೆರವಣಿಗೆಗಳಲ್ಲಿ ದೀಪಗಳನ್ನು ಹೊತ್ತು ಸಾಗುವ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.


ಪೊಲೀಸರ ಮಾಹಿತಿ ಪ್ರಕಾರ, ಡಿ.10ರಂದು ರಾತ್ರಿ ಸುಮಾರು 11.30ರ ವೇಳೆಗೆ ಬಾಲಕ ತನ್ನ ಸ್ನೇಹಿತರಿಬ್ಬರೊಂದಿಗೆ ಹೋಡಾಲ್ ಪಟ್ಟಣದಿಂದ ಬಂಚಾರಿ ಗ್ರಾಮಕ್ಕೆ ಮರಳುತ್ತಿದ್ದಾಗ, ಪಾನಮತ್ತ ಸ್ಥಿತಿಯಲ್ಲಿದ್ದ ಕೆಲವರು ಕಾರಿನಲ್ಲಿ ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಾಲಕ ಸಮೀಪದ ಮನೆಯ ಆವರಣಕ್ಕೆ ಜಿಗಿದಿದ್ದರೆ, ಇತರ ಮಕ್ಕಳು ಗ್ರಾಮದತ್ತ ಓಡಿ ಹೋಗಿದ್ದಾರೆ.


ಆ ಮನೆಯವರು ಬಾಲಕನನ್ನು ಹಿಡಿದು ಕಳ್ಳನೆಂಬ ಅನುಮಾನದಲ್ಲಿ ಹಲ್ಲೆ ನಡೆಸಿ, ಹಲವು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು. ಬಳಿಕ ಮಾತ್ರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಬಾಲಕನ ವೈದ್ಯಕೀಯ ವರದಿ ಸಲ್ಲಿಕೆಯ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿದೆ.

- Advertisement -

Related news

error: Content is protected !!