ಬೆಂಗಳೂರು: ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಭಿನ್ನಮತ ಶುರುವಾಗಿದೆ. ಒಂದೆಡೆ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಈ ಬಾರಿ ಎಲ್ಲ ಸ್ಥಾನವನ್ನು ಶಾಸಕರಿಗೆ ನೀಡಿರುವುದಕ್ಕೆ ಜಿಲ್ಲಾಧ್ಯಕ್ಷರು ಕೂಡ ಸಿಎಂ ವಿರುದ್ಧ ಗರಂ ಆಗಿದ್ದಾರೆ. ಹೀಗಾಗಿ ಬಿಜೆಪಿ ರಾಜಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷದ ಕಾರ್ಯಕರ್ತರ ದೂರುಗಳನ್ನು ಹೈಕಮಾಂಡ್ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಿಎಂಗೆ ಎರಡು ರೀತಿಯಲ್ಲಿ ತಲೆನೋವು:
ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ನಿಗಮ ಮಂಡಳಿ ನೇಮಕಾತಿ ಮಾಡಿರುವುದು ಎರಡು ರೀತಿಯಲ್ಲಿ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಸಚಿವಕಾಂಕ್ಷಿಗಳಾಗಿದ್ದ ಕೆಲ ಶಾಸಕರು ನಿಗಮ ಮಂಡಳಿ ನೇಮಕಾತಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಕೊಟ್ಟರೆ ಸಚಿವ ಸ್ಥಾನ ಕೊಡಿ, ಇಲ್ಲದಿದ್ದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ನಮಗೆ ಅವಮಾನಿಸಬೇಡಿ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಹಿಂದುಳಿದ ವರ್ಗಗಳ ಆಯೋಗದ ನೇಮಕದಲ್ಲಿ ಸಿಎಂ ಯಡವಟ್ಟು ಮಾಡಿಕೊಂಡಿದ್ದಾರೆ. ಈ ವರ್ಗದ ನೇಮಕಾತಿಯನ್ನು ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ನೀಡಲಾಗಿತ್ತು. ಆದರೆ ಇದು ಸಾಂವಿಧಾನಿಕ ಹುದ್ದೆಯಾಗಿದ್ದು, ರಾಜ್ಯಪಾಲರ ಮೂಲಕ ನೇಮಕ ವಾಗಬೇಕಿತ್ತು. ಹೀಗಾಗಿ ಈ ಸ್ಥಾನವನ್ನು ಸಿಎಂ ವಾಪಸ್ ಪಡೆದುಕೊಂಡಿದ್ದಾರೆ. ಇದಲ್ಲದೇ ಅಸಮಾಧಾನ ಭುಗಿಲೆದ್ದ ಹಿನ್ನಲೆಯಲ್ಲಿ ನಿನ್ನೆಯೇ ಲಾಲಾಜಿ ಮೆಂಡನ್ ಸೇರಿದಂತೆ ಜಿ.ಎಸ್ ತಿಪ್ಪಾರೆಡ್ಡಿ, ಬಸವರಾಜ್ ದಡೇಸುಗೂರ್, ಪರಣ್ಣ ಮನವಳ್ಳಿಯಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಒಮ್ಮುಖ ನಿರ್ಧಾರ ತೆಗೆದುಕೊಂಡ್ರಾ ಸಿಎಂ..?
ಬಿಜೆಪಿ ಕೋರ್ ಕಮಿಟಿ ಸಭೆ ಕರೆದು ನಿಗಮ ಮಂಡಳಿ ನೇಮಕಾತಿ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಇದ್ಯಾವುದನ್ನು ಸಿಎಂ ಮಾಡಿಲ್ಲ. ತನ್ನ ಗಮನಕ್ಕೂ ತಾರದೇ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕೋರ್ ಕಮಿಟಿ ಸದಸ್ಯರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ನಿಗಮ ಮಂಡಳಿ ನೇಮಕಾತಿ ಹಿಂದೆ ಬಿಎಸ್ ವೈ ಪುತ್ರ ಬಿ.ವೈ.ವಿಜಯೇಂದ್ರ ಕೈವಾಡಯಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಂದು ವರ್ಷ ಪೂರೈಸಿದ ಸರ್ಕಾರಕ್ಕೆ ನಿಗಮಮಂಡಳಿ ನೇಮಕಾತಿ ವಿಚಾರ ತೀವ್ರ ತಲೆನೋವಾಗಿ ಪರಿಣಮಿಸಿದೆ. ಇವೆಲ್ಲವನ್ನು ಸಿಎಂ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.