



ಮಂಗಳೂರು: ನೆಹರೂ ಮೈದಾನದ ಬಳಿಯ ಇಂದಿರಾ ಕ್ಯಾಂಟೀನ್ ಸಮೀಪ ನಡೆದ ಖಾಸಗಿ ಬಸ್ ನಿರ್ವಾಹಕ ರಾಜೇಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30) ಅವರ ಮೃತದೇಹ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು. ಆರಂಭದಲ್ಲಿ ಅವರು ಎಲ್ಲಿಯವರೆಂದು ತಿಳಿದಿರಲಿಲ್ಲ.
ಮೃತದೇಹವನ್ನು ಪೊಲೀಸರು ವೆನ್ಹಾಕ್ ಶವಾಗಾರದಲ್ಲಿಟ್ಟಿದ್ದರು. ಇದೀಗ ರಾಜೇಶ್ ಬಜಪೆಯವರೆಂದು ತಿಳಿದುಬಂದಿದೆ. ರಾಜೇಶ್ ಅವರಿಗೆ ತಂದೆ, ತಾಯಿ ಇಲ್ಲ. ಸಹೋದರಿ ಮಾತ್ರ ಇದ್ದಾರೆ. ಕುಟುಂಬಸ್ಥರು ಬಂದು ಶವ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮಂಗಳೂರಿನಲ್ಲೇ ರೂಮ್‌ನಲ್ಲಿ ಉಳಿದುಕೊಂಡು ಬಸ್ ನಿರ್ವಾಹಕನ ಕರ್ತವ್ಯಕ್ಕೆ ಬರುತ್ತಿದ್ದರು. ಅವರು ಹಣದ ವ್ಯವಹಾರವನ್ನೂ ಮಾಡುತ್ತಿದ್ದು, ಇದೇ ವಿಚಾರದಲ್ಲಿ ಕೊಲೆ ಮಾಡಲಾಗಿದೆಯೋ ಅಥವಾ ಇನ್ಯಾವುದೋ ಕಾರಣ ಇದೆಯೋ ಎಂಬುದು ಆರೋಪಿಗಳ ಪತ್ತೆಯಿಂದ ತಿಳಿದುಬರಬೇಕಿದೆ.
ಸ್ಟೇಟ್ ಬ್ಯಾಂಕ್ ಪರಿಸರದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಕುರಿತು ಸುಳಿವು ಸಿಕ್ಕಿದೆ ಎನ್ನಲಾಗಿದೆ.








