Thursday, April 25, 2024
spot_imgspot_img
spot_imgspot_img

ಕಾಸರಗೋಡು: 11 ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಿದ ಕೇರಳ ಸರ್ಕಾರ..! ಮಲತಾಯಿ ಧೋರಣೆಗೆ ಕನ್ನಡಿಗರ ಆಕ್ರೋಶ

- Advertisement -G L Acharya panikkar
- Advertisement -

ಕೇರಳ ಗಡಿಭಾಗದಲ್ಲಿ ಕೇರಳ ಸರ್ಕಾರ ಕನ್ನಡದ ವಿರುದ್ಧ ಮತ್ತೆ ಮಲತಾಯಿ ಧೋರಣೆ ತೋರಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕರ್ನಾಟಕದ ಭಾಗವೇ ಆಗಿದ್ದ ಮತ್ತು ಅತೀ ಹೆಚ್ಚು ಕನ್ನಡಿಗರನ್ನೇ ಹೊಂದಿರುವ ಗಡಿ ಜಿಲ್ಲೆಯಾದ ಕಾಸರಗೋಡಿನ ಕನ್ನಡ ಪ್ರಾಬಲ್ಯವಿರುವ 11 ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಭಾಷಾಂತರ ಮಾಡಿದ್ದು ಆ ಪ್ರದೇಶದಲ್ಲಿನ ಕನ್ನಡ ಭಾಷಾ ಪ್ರೇಮಿಗಳಿಗೆ ನುಂಗಲಾರದ ತುತ್ತಾಗಿದೆ.

ಈ ಹಿಂದೆಯೂ ಗಡಿಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಅಳವಡಿಸುವ ಆದೇಶ ನೀಡಿದ್ದ ಕೇರಳ ಸರ್ಕಾರ ಈಗ ಮತ್ತೆ ಗ್ರಾಮಗಳ ಹೆಸರನ್ನು ಬದಲಾಯಿಸುವ ಮೂಲಕ ಗಡಿಭಾಗದ ಕನ್ನಡಿಗರ ಭಾಷಾಭಿಮಾನದ ವಿರುದ್ಧ ಸವಾರಿ ಮಾಡಲು ಹೊರಟಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ 11 ಗ್ರಾಮಗಳು ಶತಶತಮಾನಗಳ ಇತಿಹಾಸವನ್ನು ಸೂಚಿಸುವ ದ್ಯೋತಕವಾಗಿದ್ದು, ಈಗ ಮಲಯಾಳಂಗೆ ಭಾಷಾಂತರ ಮಾಡಿದರೆ, ಭಾಷೆಯ ಜೊತೆಗೆ ಸಂಸ್ಕೃತಿಗೂ ಅಪಚಾರವಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಮಧೂರು ಎಂಬ ಗ್ರಾಮವನ್ನು ಮಧುರಂ, ಕಾರಡ್ಕವನ್ನು ಕಡಗಮ್, ಪಿಳಿಕುಂಜೆಯನ್ನು ಪಿಳಿಕುನ್ನು, ಮಂಜೇಶ್ವರವನ್ನು ಮಂಜೇಶ್ವರ0, ಕುಂಬಳವನ್ನು ಕುಂಬ್ಳಾ, ನೆಲ್ಲಿಕುಂಜವನ್ನು ನೆಲ್ಲಿಕುನ್ನಿ, ಮಲ್ಲ ಅನ್ನು ಮಲ್ಲಂ, ಬೇದಡ್ಕವನ್ನು ಬೇಡಗಮ್, ಆನೆಬಾಗಿಲುವನ್ನು ಆನೆವಾಗಿಲ್, ಹೊಸದುರ್ಗವನ್ನು ಪುದಿಯಕೋಟ, ಸಸಹಿತ್ಲುವನ್ನು ಶೈವಲಖ್ ಎಂಬುವುದಾಗಿ ಬದಲಾಯಿಸಲು ತೀರ್ಮಾನ ಮಾಡಿದೆ.

ಹಲವು ಭಾಗದಲ್ಲಿ ಭಾಷಾಂತರಗೊಂಡ ಹೆಸರಿನ ಬೋರ್ಡ್ ಕೂಡಾ ಹಾಕಲಾಗಿದ್ದು, ಕನ್ನಡಿಗರನ್ನು ಕೆರಳಿಸಿದೆ. ಕಾಸರಗೋಡುವಿನಲ್ಲಿ ನಡೆಯುತ್ತಿರುವ ಕನ್ನಡದ ದೌರ್ಜನ್ಯ ವಿರುದ್ಧ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುವ ಅಗತ್ಯವಿದೆ. ರಾಜ್ಯದ ಕನ್ನಡ ಪರ ಸಂಘಟನೆಗಳು ಕಾಸರಗೋಡು ಕನ್ನಡಿಗರ ಜೊತೆ ಇನ್ನಾದರೂ ನಿಲ್ಲುವ ಅನಿವಾರ್ಯತೆ ಸೃಷ್ಠಿಯಾಗಿದೆ. ಹಲವಾರು ಜನಪ್ರತಿನಿಧಿಗಳು ಕರ್ನಾಟಕ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!