


ವಾಷಿಂಗ್ಟನ್: ಪಶ್ಚಿಮ ಅಲಸ್ಕಾದ ದೂರದ ಮಿಲಿಟರಿ ರಾಡಾರ್ ಸ್ಥಳದಲ್ಲಿ ವಿಮಾನ ಪತನಗೊಂಡು, 8 ಮಂದಿ ಸಾವನ್ನಪ್ಪಿದ್ದಾರೆ.
ಆರು ಪ್ರಯಾಣಿಕರು ಸೇರಿದಂತೆ ಚಾರ್ಟರ್ ವಿಮಾನದಲ್ಲಿದ್ದ ಎಲ್ಲಾ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಮಿಲಿಟರಿ ತಿಳಿಸಿದೆ. ಅಲಸ್ಕಾದ ಅತಿದೊಡ್ಡ ನಗರವಾದ ಆಂಕಾರೇಜ್‌ನಿಂದ ಸುಮಾರು 450 ಮೈಲುಗಳು (725 ಕಿಮೀ) ದೂರದಲ್ಲಿರುವ ಕೇಪ್ ನ್ಯೂವೆನ್‌ಹ್ಯಾಮ್ ಲಾಂಗ್ ರೇಂಜ್ ರಾಡಾರ್ ಸೈಟ್ ವಿಮಾನ ನಿಲ್ದಾಣದ ಪಶ್ಚಿಮಕ್ಕೆ ಈ ಅಪಘಾತ ಸಂಭವಿಸಿದೆ.
ಈ ಸೌಲಭ್ಯವು ಅಲಸ್ಕಾದ ವಾಯುಪ್ರದೇಶ ಮತ್ತು ಅದರ ಗಡಿಗಳಲ್ಲಿ ವಿಮಾನಗಳನ್ನು ಪತ್ತೆಹಚ್ಚುವ ದೂರದ ರಾಡಾರ್ ತಾಣಗಳ ಜಾಲದ ಭಾಗವಾಗಿದ್ದು, ಇದನ್ನು ಪೆಸಿಫಿಕ್ ವಾಯುಪಡೆಗಳ ಪ್ರಾದೇಶಿಕ ಬೆಂಬಲ ಕೇಂದ್ರವು ನಿರ್ವಹಿಸುತ್ತದೆ.
ಆಂಕಾರೇಜ್ ಮೂಲದ ಏರ್ ಚಾರ್ಟರ್ ಕಂಪನಿ ಸೆಕ್ಯುರಿಟಿ ಏವಿಯೇಷನ್ ನಿರ್ವಹಿಸುವ ಸೆಸ್ನಾ 441 ವಿಮಾನವು ಆಂಕಾರೇಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಕ್ತಾರರು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.








