Thursday, August 20, 2026
spot_imgspot_img
spot_imgspot_img

ಚಿತ್ರದುರ್ಗ: ಪಾಳುಬಾವಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ – ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಚಿತ್ರದುರ್ಗ: ಮಹಾದೇವಪುರದ ಪಾಳು ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ ಪ್ರಕರಣ ಸಂಬಂಧ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಹಾಗೂ ತಳಕು ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಸ್ಟ್ 13ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ಸುಮಲತಾ, ಗಜೇಂದ್ರ ಎನ್ನುವವರ ಜೊತೆ ಪ್ರೇಮವಿವಾಹವಾಗಿದ್ದಳು. ತನ್ನ ಕುಟುಂಬಸ್ಥರ ಕಣ್ತಪ್ಪಿಸಲು ಜಮೀನೊಂದರಲ್ಲಿ ಈ ನವದಂಪತಿಗಳು ಬೀಡುಬಿಟ್ಟಿದ್ದರು. ಈ ವೇಳೆ ಸುಮಲತಾಳನ್ನು ಹಿಂಬಾಲಿಸಿದ್ದ ಗಜೇಂದ್ರನ ಸ್ನೇಹಿತ ಬೋರಯ್ಯ, ಜಮೀನಿನಲ್ಲಿ ಬಟ್ಟೆ ಬದಲಿಸುತ್ತಿದ್ದ ತನ್ನ ಸ್ನೇಹಿತನ ಪತ್ನಿಯಾದ ಸುಮಲತಾ ಮೇಲೆ ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಲೆಗೈದಿದ್ದ.

ಬಳಿಕ ತನ್ನ ಸಹೋದರ ಕಾರಯ್ಯನನ್ನು ಕರೆಸಿಕೊಂಡು, ಉಪಾಯದಿಂದ ಮೃತದೇಹವನ್ನು ಚಳ್ಳಕೆರೆ ತಾಲೂಕಿನ ಮಹಾದೇವಪುರ ಬಳಿಯ ಪಾಳು ಬಾವಿಯಲ್ಲಿ ಎಸೆದಿದ್ದಾರೆ. ಶವವನ್ನು ಸುಮಲತಾ ಎಂದು ಪತ್ತೆಹಚ್ಚಿದ್ದ ಕುಟುಂಬಸ್ಥರು ಗಜೇಂದ್ರನ ವಿರುದ್ಧ ದೂರು ದಾಖಲಿಸಿದ್ದರು.

ಗಜೇಂದ್ರನೇ ಕೊಲೆಗೈದಿದ್ದಾನೆಂದು ಆರೋಪಿಸಿದ್ದರು. ಹೀಗಾಗಿ ಪ್ರಕರಣದ ಬೆನ್ನತ್ತಿದ ನಾಯಕನಹಟ್ಟಿ ಪಿಎಸ್‌ಐ ಪಾಂಡುರಂಗಪ್ಪ ಹಾಗೂ ತಳಕು ಸಿಪಿಐ ಹನುಮಂತಪ್ಪ ನೇತೃತ್ವದ ಪೊಲೀಸರ ತಂಡ ಕೊಲೆ ಕೇಸ್‌ನಲ್ಲಿದ್ದ ಅಸಲಿ ಸತ್ಯವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದೆ.

ಸದ್ಯ ಪ್ರಕರಣದ ಆರೋಪಿಗಳಾದ ಬೋರಯ್ಯ ಹಾಗು ಕಾರಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕಾರ್ಯವನ್ನು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!