Wednesday, July 22, 2026
spot_imgspot_img
spot_imgspot_img

ಕೇಪು: ಕೋಳಿ ಅಂಕಕ್ಕೆ ಪೊಲೀಸ್ ರೈಡ್- ಪುತ್ತೂರು ಶಾಸಕರ ಮತ್ತು 16 ಜನರ ವಿರುದ್ದ ಪ್ರಕರಣ ದಾಖಲು- 22 ಕೋಳಿಗಳು ಮತ್ತು ಬಾಳುಕತ್ತಿಗಳು ವಶಕ್ಕೆ…!

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮದ ಕೇಪು ಎಂಬಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ತಂಡದೊಂದಿಗೆ ಡಿ. 2೦ರಂದು ಮಧ್ಯಾಹ್ನ ದಾಳಿ ನಡೆಸಿದರು.


ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕೋಳಿ ಅಂಕ ನಡೆಸಲು ಮುಂದಾಗಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದ್ದು, ಹಲವು ಮಂದಿ ಕೋಳಿ ಅಂಕಕ್ಕೆ ಬಳಸುವ ಹುಂಜ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿದ್ದನ್ನು ಪೊಲೀಸರು ಗಮನಿಸಿದರು. ಸ್ಥಳದಲ್ಲಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಕುರಿತು ಸೂಕ್ತ ಕಾನೂನು ತಿಳುವಳಿಕೆ ನೀಡಲಾಯಿತು.
ಈ ವೇಳೆ ಸ್ಥಳದಲ್ಲೇ ಹಾಜರಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಅಲ್ಲಿದ್ದ ಜನರಿಗೆ ಅಕ್ರಮ ಕೋಳಿ ಅಂಕ ಮುಂದುವರಿಸಲು ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ ಪರಿಣಾಮ, ಗುಂಪು ಕಾನೂನುಬಾಹಿರವಾಗಿ ಕೋಳಿ ಅಂಕ ಆಟವನ್ನು ಆರಂಭಿಸಿದೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ವಿಟ್ಲ ಪೊಲೀಸರು ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕೋಳಿ ಅಂಕದಲ್ಲಿ ತೊಡಗಿಸಿಕೊಂಡಿದ್ದ 16 ಮಂದಿಯನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸಲಾಗುತ್ತಿದ್ದ ಬಾಳು (ಕತ್ತಿಗಳು)ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


ಈ ಪ್ರಕರಣದಲ್ಲಿ, ತಮ್ಮ ಜಾಗದಲ್ಲಿ ಯಾವುದೇ ಸೂಕ್ತ ಪರವಾನಿಗೆ ಪಡೆಯದೇ ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಮುರಳೀಧರ ರೈ ಅವರ ವಿರುದ್ಧ, ಜೊತೆಗೆ ಇಂತಹಾ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೋಳಿ ಅಂಕದಲ್ಲಿ ಭಾಗವಹಿಸಿದ್ದ 16 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 190/2025 ರಂತೆ ಪ್ರಕರಣ ದಾಖಲಾಗಿದೆ.


ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 189(2), 49, 221, 223, 190 ಹಾಗೂ ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ 1960ರ ಕಲಂ 3 ಮತ್ತು 11ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!