Monday, May 6, 2024
spot_imgspot_img
spot_imgspot_img

ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಪೂರ್ವಾನುಮತಿ ಕಡ್ಡಾಯ; ಜಿಲ್ಲಾಧಿಕಾರಿ ಸೂಚನೆ

- Advertisement -G L Acharya panikkar
- Advertisement -

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಅಗತ್ಯವಾಗಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜಕೀಯ ಪಕ್ಷಗಳು, ಚುನಾವಣೆ ಸಂಬಂಧ ನಡೆಸಲಾಗುವ ಸಭೆ-ಸಮಾರಂಭಗಳು, ಪ್ರಚಾರ ಕಾರ್ಯಕ್ರಮಗಳಿಗೆ, ವಾಹನ ಬಳಕೆಗಾಗಿ ಅನುಮತಿ ಪಡೆಯಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗಿರುವ ಏಕ ಗವಾಕ್ಷಿ ಪದ್ಧತಿಯಡಿ ಅರ್ಜಿ ಸಲ್ಲಿಸಬೇಕು. ರಾಜಕೀಯ ಪಕ್ಷಗಳು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಭಾರತ ಚುನಾವಣಾ ಆಯೋಗವು ಪರಿಚಯಿಸಿರುವ ‘ಸುವಿಧಾ ಆಪ್’ ಮೂಲಕವೂ ಅನುಮತಿ ಪಡೆಯಬಹುದಾಗಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಮತ್ತು ವಾಹನ ಪರವಾನಿಗೆಗಾಗಿಯೂ ಅನುಮತಿ ಪಡೆಯಬೇಕು ಎಂದ ಅವರು, ಸ್ಟಾರ್ ಪ್ರಚಾರಕರು ಹಾಗೂ ಪ್ರಚಾರ ಸ್ಥಳಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆಯು ಎಲ್ಲಾ ಪಕ್ಷಗಳು, ಅಭ್ಯರ್ಥಿಗಳಿಗೂ ಅನ್ವಯವಾಗಲಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮಗಳನ್ನು ಪಾಲನೆ ಮಾಡುವುದರಿಂದ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಹ ಸಹಕಾರ ನೀಡಬೇಕೆಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!