Friday, April 26, 2024
spot_imgspot_img
spot_imgspot_img

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಘಟಾನುಘಟಿಗಳ ನಡುವೆ ಪೈಪೋಟಿ!!

- Advertisement -G L Acharya panikkar
- Advertisement -

ಬೆಂಗಳೂರು: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಘಟಾನುಘಟಿ ನಾಯಕರುಗಳ ಮಕ್ಕಳೇ ಭಾರಿ ಪೈಪೋಟಿಗಿಳಿದಿದ್ದಾರೆ.

ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಆನ್‍ಲೈನ್ ಮೂಲಕ ಮತದಾನ ನಡೆಸಿ, ಅದರಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಂತಹ ಮೂವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲು ರಾಷ್ಟ್ರಮಟ್ಟದ ನಾಯಕರು ಮುಂದಾಗಿದ್ದಾರೆ.
ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯುಳ್ಳ 10 ಜನರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದ ಸಮಿತಿ ಸಂದರ್ಶನ ಮಾಡಲಾಗಿದ್ದು, ಅದರಲ್ಲಿ ಈ ಹಿಂದೆ ತಾವು ಪಕ್ಷಕ್ಕೆ ಸಲ್ಲಿಸಿರುವ ಸೇವೆ ಮತ್ತು ಸಿದ್ದಾಂತದ ಬಗ್ಗೆ, ಸಂಘಟನೆಗೆ ಸಮಯ ನೀಡುವುದು ಸೇರಿದಂತೆ ವಿವಿಧ ರೀತಿಯ ಸಾಮರ್ಥ್ಯಗಳ ಕುರಿತು ಚರ್ಚಿಸಲಾಗಿದೆ.

ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಎನ್‍ಎಸ್‍ಯುಐ ಅಧ್ಯಕ್ಷರಾಗಿ ಕೆಲಸ ಮಾಡಿರುವ ಎಚ್.ಎಸ್.ಮಂಜುನಾಥ್, ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಥುನ್ ರೈ, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ, ಬೆಂಗಳೂರು ಕೇಂದ್ರ ವಿಭಾಗದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ವಿಶ್ವನಾಥ್, ದಕ್ಷಿಣ ವಿಭಾಗದ ಜಿಲ್ಲಾಧ್ಯಕ್ಷರಾಗಿದ್ದ ಆನಂದ್, ಉಪಾಧ್ಯಕ್ಷರಾಗಿದ್ದ ಶಿವಕುಮಾರ್, ಭವ್ಯಾ, ಕಾಂಗ್ರೆಸ್ ನಾಯಕ ರಾಜಗೋಪಾಲ್‍ರೆಡ್ಡಿ ಪುತ್ರಿ ದೀಪಿಕಾರೆಡ್ಡಿ, ನಿಖಿಲ್ ಕೊಂಡಜ್ಜಿ ಸೇರಿದಂತೆ 10 ಮಂದಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಅಭ್ಯರ್ಥಿಯ ಸಾಮರ್ಥ್ಯ, ಹಿನ್ನೆಲೆ ಹಾಗೂ ಪಕ್ಷದ ವಿಷಯದಲ್ಲಿರುವ ಬದ್ಧತೆಯನ್ನು ವಿಶ್ಲೇಷಿಸಿ ಅಂತಿಮವಾಗಿ ಯಾರು ಸ್ಪರ್ಧೆ ಮಾಡಬಹುದು ಎಂಬ ನಿರ್ಧಾರ ತೆಗೆದುಕೊಂಡು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ ಹೆಸರಿರುವವರು ಡಿ.31ರ ಒಳಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆನ್‍ಲೈನ್ ಮೂಲಕವೇ ನಾಮಪತ್ರ ಸಲ್ಲಿಸಬೇಕು. ಬಹುತೇಕ ಜ.10ರೊಳಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.

ಈ ಮೊದಲು ಸಂದರ್ಶನ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಹೊಸದಾಗಿ ಸದಸ್ಯತ್ವ ಪಡೆದವರೂ ನಾಮಪತ್ರ ಸಲ್ಲಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬಹುದಿತ್ತು. ಆದರೆ, ಆ ಪ್ರಕ್ರಿಯೆಯಲ್ಲಿ ಪ್ರಭಾವಿಗಳ ಮಕ್ಕಳು ಅಥವಾ ಪ್ರಭಾವಿ ನಾಯಕರ ಬೆಂಬಲ ಇರುವವರು ಗೆದ್ದುಬರುತ್ತಿದ್ದರು. ಈ ಹಿಂದೆ ರಿಝ್ವಾನ್ ಅರ್ಷದ್, ಪ್ರಿಯಾಂಕ್ ಖರ್ಗೆ, ಬಿ.ವಿ.ಶ್ರೀನಿವಾಸ್ ನಡುವೆ ಸ್ಪರ್ಧೆ ಎದುರಾದಾಗ ಶ್ರೀನಿವಾಸ್ ಸೋಲು ಕಂಡಿದ್ದರು.
ರಿಝ್ವಾನ್ ಅರ್ಷದ್‍ಗೆ ಸಿದ್ದರಾಮಯ್ಯ ಬೆಂಬಲ ಇತ್ತು, ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಎಂಬ ಕಾರಣಕ್ಕೆ ಇಬ್ಬರೂ ಆಯ್ಕೆಯಾಗಿದ್ದರು ಎನ್ನಲಾಗುತ್ತಿದೆ. ಶ್ರೀನಿವಾಸ್ ಬಹಳಷ್ಟು ಕೆಲಸ ಮಾಡಿದ್ದರೂ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಭಾವಿಗಳ ಮಕ್ಕಳು ಬಂದು ಅಧ್ಯಕ್ಷ ಸ್ಥಾನವನ್ನು ಹೈಜಾಕ್ ಮಾಡಬಾರದು, ಕೆಲಸ ಮಾಡುವವರಿಗೆ ಸೋಲಾಗಬಾರದು ಎಂಬ ಕಾರಣಕ್ಕೆ ಈ ಬಾರಿ ಹೊಸ ಪದ್ಧತಿಯನ್ನು ಅನುಸರಿಸಿದ್ದಾರೆ.

- Advertisement -

Related news

error: Content is protected !!