ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಹಿನ್ನೆಲೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಪ. ಬಂಗಾಳ ರಾಜ್ಯಕ್ಕೆ ನೀಡಬೇಕಿದ್ದ ಭೇಟಿಯನ್ನೂ ರದ್ದುಮಾಡಿದ್ದಾರೆ.

ಇಂದು ಯಾವೆಲ್ಲಾ ಸಭೆಗಳು ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ..
ಬೆಳಗ್ಗೆ 9 ಗಂಟೆಗೆ ಆಂತರಿಕ ವಿಮರ್ಶಾ ಸಭೆ– ಈ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಹುತೇಕ ಕೇಂದ್ರದ ನಾಯಕರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಬೆಳಗ್ಗೆ 10 ಗಂಟೆಗೆ ಕೊರೊನಾ ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ– ಈ ಸಭೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಕೊರೊನಾ ಸೋಂಕಿನಿಂದ ಹೆಚ್ಚು ಹೊಡೆತಕ್ಕೆ ಒಳಗಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12:30ಕ್ಕೆ ಆಕ್ಸಿಜನ್ ತಯಾರಕರ ಜೊತೆ ಸಭೆ– ಇನ್ನು ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿರುವ ಹಿನ್ನೆಲೆ ಪ್ರಧಾನಿ ಮೋದಿ ಆಕ್ಸಿಜನ್ ತಯಾರಕರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಆಕ್ಸಿಜನ್ ತಯಾರಿಕೆ ಹೆಚ್ಚಿಸುವ ಕುರಿತು ಹಾಗೂ ವೈದ್ಯಕೀಯ ಸೇವೆಗೆ ಹೆಚ್ಚು ಆಕ್ಸಿಜನ್ ನೀಡುವಂತೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.










