ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ನಾಗರ ಪಂಚಮಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ನಾಳೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರಿಗೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ನಾಳೆ ಹಬ್ಬ ನಡೆಯಲಿದ್ದು, ಹಬ್ಬದ ದಿನವೇ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಬಂದ್ ಆಗಲಿದೆ. ಭಕ್ತಾಧಿಗಳು ನೀಡುವ ಹಾಲು, ಸೀಯಾಳ, ಹಣ್ಣು ಕಾಯಿ, ಪೂಜಾ ಸಾಮಾಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹಬ್ಬವಿರುವುದರಿಂದ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರತಿ ವರ್ಷ ನಾಗರಪಂಚಮಿಯಂದು ಕುಕ್ಕೆಯಲ್ಲಿ ಲಕ್ಷಾಂತರ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಭೀತಿಯಿಂದ ದೇಗುಲದ ಅರ್ಚಕರಿಂದ ಪೂಜೆ ನಡೆಯಲಿದೆ. ಭಕ್ತರ ಪರವಾಗಿ ಅರ್ಚಕರೇ ಸಂಪ್ರದಾಯದಂತೆ ಪೂಜೆ ನೆರೆವೇರಿಸಲಿದ್ದಾರೆ. ಹೀಗಾಗಿ ಭಕ್ತರು ಅವರವರ ಮನೆಯ ನಾಗನಕಟ್ಟೆಗೆ ಪೂಜೆ ಸಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಕುಡುಪು ದೇಗಲಕ್ಕೂ ಭಕ್ತರಿಗೆ ಪ್ರವೇಶವಿಲ್ಲ
ಮತ್ತೊಂದು ಕಡೆ ಮಂಗಳೂರಿನ ಪ್ರಸಿದ್ಧ ಕುಡುಪು ದೇಗಲಕ್ಕೂ ಭಕ್ತರಿಗೆ ಪ್ರವೇಶವಿಲ್ಲ. ನಾಗರಪಂಚಮಿ ದಿನದಂದು ಸಾರ್ವಜನಿಕ ಸೇವೆ, ಅನ್ನಸಂತರ್ಪಣೆ ಇರುವುದಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.