

ಚೆನ್ನೈ: ಗೋಮೂತ್ರದಲ್ಲಿನ ಔಷಧೀಯ ಗುಣಗಳನ್ನ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಕೊಂಡಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತ ಐಐಟಿ ನಿರ್ದೇಶಕನ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದ ಪಿ. ಕಾರ್ತಿ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಐಐಟಿ ಮದ್ರಾಸ್ ನಿರ್ದೇಶಕರು ನಕಲಿ ವಿಜ್ಞಾನವನ್ನು ಹರಡುತ್ತಿರುವುದು ಅಸಂಬದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೋಮೂತ್ರವು ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರಯ ನಿರೋಧಕ ಹಾಗೂ ಜೀರ್ಣಕಾರಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉರಿ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿಗೆ ಗೋಮೂತ್ರ ಸೂಕ್ತ. ಅಲ್ಲದೇ ಗೋಮೂತ್ರದ ಔಷಧೀಯ ಗುಣಗಳನ್ನು ಪರಿಗಣಿಸಬೇಕು ಎಂದೂ ಕಾಮಕೋಟಿ ಪ್ರತಿಪಾದಿಸಿದ್ದಾರೆ.
ಇದೇ ತಿಂಗಳು ಜನವರಿ 15ರಂದು ಮಾತು ಪೊಂಗಲ್ ಪ್ರಯುಕ್ತ ಗೋ ಸಂರಕ್ಷಣಾ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವಾಗ, ಸನ್ಯಾಸಿಯೊಬ್ಬರು ತೀವ್ರ ಜ್ವರವಿದ್ದಾಗ ಗೋಮೂತ್ರ ಸೇವಿಸಿ ಹೇಗೆ ಚೇತರಿಸಿಕೊಂಡರು ಎಂಬ ಉದಾಹರಣೆ ನೀಡುವಾಗ ಕಾಮಕೋಟಿ ಅವರು ಈ ಹೇಳಿಕೆಗಳನ್ನು ನೀಡಿದ್ದರು.