Tuesday, August 11, 2026
spot_imgspot_img
spot_imgspot_img

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಮಗಳು!

- Advertisement -
- Advertisement -

ಬೆಂಗಳೂರು: ಪ್ರೀತಿ ಮತ್ತು ಲಿವ್-ಇನ್ ರಿಲೇಷನ್‌ಶಿಪ್‌ಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಗಳೇ ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಕೆ.ಆರ್. ಪುರದ ಸಿಗೇಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.

ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಇವರ ಕಿರಿಯ ಮಗಳು ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳು. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಮದುವೆಯಾಗದೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮಗಳ ಈ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್‌ಮೆಂಟ್’ಗೆ ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿದಾಗ ಪ್ರೇಮಿಗಳಿಬ್ಬರು ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ. ತೀವ್ರವಾಗಿ ಇರಿತಕ್ಕೊಳಗಾದ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯ ಒಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಮನೆಯೊಳಗೆ ಹೆಂಡತಿ, ಕಿರಿಯ ಮಗಳು ಸಾವನ್ನಪ್ಪಿದ್ದರೂ, ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಹೇಗೋ ಎದ್ದುಬಿದ್ದು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ನೋಡಿ ಸ್ಥಳೀಯರು ತಕ್ಷಣವೇ ‘112’ ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ ತಕ್ಷಣವೇ ಸೋಮಸುಂದರ್ ಅವರನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ತೀವ್ರ ರಕ್ತಸ್ರಾವದಿಂದ ಸೋಮಸುಂದರ್ ಕೊನೆಯುಸಿರೆಳೆದಿದ್ದಾರೆ. ಆದರೆ, ಸಾವನ್ನಪ್ಪುವ ಮುನ್ನ ಅವರು ಪೊಲೀಸರಿಗೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ.

“ನನ್ನ ದೊಡ್ಡ ಮಗಳು ಶ್ವೇತಾ ತನ್ನ ಬಾಯ್ ಫ್ರೆಂಡ್ ಜೊತೆ ಲಿವಿಂಗ್‌ನಲ್ಲಿದ್ದಳು. ಇದು ಸರಿಯಲ್ಲ ಎಂದು ಬುದ್ಧಿ ಹೇಳಲು ಬಂದಿದ್ದೆವು. ಆದರೆ ಮಗಳು ಮತ್ತು ಆಕೆಯ ಬಾಯ್ ಫ್ರೆಂಡ್ ನಮ್ಮ ಮೇಲೆ ಚಾಕುವಿನಿಂದ ಇರಿದರು. ನನ್ನ ಹೆಂಡತಿ ಮತ್ತು ಚಿಕ್ಕ ಮಗಳು ಮನೆ ಒಳಗಡೆಯೇ ಇದ್ದಾರೆ” ಎಂದು ಸೋಮಸುಂದರ್ ಪೊಲೀಸರ ಎದುರು ಕಣ್ಣೀರಿಡುತ್ತಾ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!