Friday, September 4, 2026
spot_imgspot_img
spot_imgspot_img

ಮಂಗಳೂರಿನಲ್ಲಿ 7 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್

- Advertisement -
- Advertisement -

ಬೆಂಗಳೂರು : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಖಾಯಂಗೊಳಿಸಿರುವ ಹೈಕೋರ್ಟ್, ಇಂಥ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿಮೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ತೀಕ್ಷ್ಮವಾಗಿ ನುಡಿದಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಜಯಬನ್ ಆದಿವಾಸಿ, ಮುಖೇಶ್ ಸಿಂಗ್ ಹಾಗೂ ಜಾರ್ಖಂಡ್‌ನ ಮನೀಶ್ ತಿರ್ಕಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಹಾಗೂ ಶಿಕ್ಷೆ ದೃಢೀಕರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಪಿ.ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದಲ್ಲಿ ಅಂತಹ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅಪರಾಧಿಗಳು 7 ವರ್ಷ 7 ತಿಂಗಳ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಆಘಾತಕಾರಿ ಘಟನೆ ಕೇವಲ ನ್ಯಾಯಾಂಗ ಮಾತ್ರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದೆ ಎಂದಿರುವ ನ್ಯಾಯಪೀಠ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸಿದೆ.

ಪ್ರಕರಣವೇನು?
ಮಂಗಳೂರಿನ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಅಪರಾಧಿಗಳು, ಅದೇ ಕಾರ್ಖಾನೆಯಲ್ಲಿ ಈ ಕೆಲಸ ಮಾಡುತ್ತಿದ್ದ ಮಹಿಳೆಯ ಪುತ್ರಿಯನ್ನು 2021ರ ನವೆಂಬರ್ 21ರಂದು, ಚಿಕ್ಕಿ ಕೊಡಿಸುವುದಾಗಿ ನಂಬಿಸಿ ತಮ್ಮ ಕೊಠಡಿಗೆ ಕರೆದೊಯ್ದಿದ್ದರು. ಒಬ್ಬ ಆರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇನ್ನಿಬ್ಬರು ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕುತ್ತಿಗೆ ಹಿಸುಕಿ ಕೊಂದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ಜತೆಗೆ ತಲಾ 40 ಸಾವಿರ ರೂ. ದಂಡ ವಿಧಿಸಿತ್ತು.

- Advertisement -

Related news

error: Content is protected !!