


ವಿಜಯನಗರ : ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ಗುಡಿಸಲೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ನಡೆದಿದೆ.
ಅಕಸ್ಮಾತ್ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಆ ಸಮಯದಲ್ಲಿ ಮನೆಯಲ್ಲಿದ್ದವರು ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಗೆ ಸೇರಿದ ಬಹುತೇಕ ಎಲ್ಲಾ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಮನೆಯ ಮಾಲೀಕ ಲಕ್ಷ್ಮಣ ನಾಯ್ಕ್ ಅವರ ಪತ್ನಿ ತುಳಸಿಬಾಯಿ ಮಾಹಿತಿ ನೀಡಿದಂತೆ, ಟಿವಿ, ಮಂಚ, ಘಡ್ರೆಜ್ನಲ್ಲಿದ್ದ ಬಟ್ಟೆಗಳು, ಮಕ್ಕಳ ಬೆಳ್ಳಿ ಗಡಾಗ, ಚೈನ್, ಸುಮಾರು 20 ಗ್ರಾಂ ಬಂಗಾರ, ಮಕ್ಕಳ ಪುಸ್ತಕಗಳು, ದ್ವಿಚಕ್ರ ವಾಹನ ಸೇರಿದಂತೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ. ಲಕ್ಷ್ಮಣ ನಾಯ್ಕ್–ತುಳಸಿಬಾಯಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು ಇದ್ದು, ಮನೆ ಸಂಪೂರ್ಣವಾಗಿ ಸುಟ್ಟು ಹೋದ ಹಿನ್ನೆಲೆಯಲ್ಲಿ ಕುಟುಂಬವು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಕಣ್ಣೀರಿಡುತ್ತಾ ಅವರು ನೆರವಿಗಾಗಿ ಕೈಚಾಚಿದ್ದಾರೆ.
ಘಟನೆಯ ಮಾಹಿತಿ ಪಡೆದ ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿಷಯವನ್ನು ವಿಜಯನಗರ ಜಿಲ್ಲೆಯ ಶಾಸಕರಿಗೂ ತಿಳಿಸಲಾಗಿದೆ. ಪೀಡಿತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.









